Tel: 7676775624 | Mail: info@yellowandred.in

Language: EN KAN

    Follow us :


 ಹೆಗ್ಗಡೆ ನನ್ನ ಏಳ್ಗೆ ಸಹಿಸಲಿಲ್ಲ; ಆದಿಶ್ರೀ ಜತೆ ಭಿನ್ನಾಭಿಪ್ರಾಯ ಇತ್ತು ಪ್ರತಿಮೆ ಉದ್ಘಾಟನಾ ಸಮಾರಂಭದಲ್ಲಿ ಹಳೆಯ ನೆನಪು ಮೆಲಕು ಹಾಕಿದ ದೇವೇಗೌಡ

Posted Date: 25 Nov, 2018

 ಹೆಗ್ಗಡೆ ನನ್ನ ಏಳ್ಗೆ ಸಹಿಸಲಿಲ್ಲ; ಆದಿಶ್ರೀ ಜತೆ ಭಿನ್ನಾಭಿಪ್ರಾಯ ಇತ್ತು ಪ್ರತಿಮೆ ಉದ್ಘಾಟನಾ ಸಮಾರಂಭದಲ್ಲಿ ಹಳೆಯ ನೆನಪು ಮೆಲಕು ಹಾಕಿದ ದೇವೇಗೌಡ

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆ ನನ್ನ ಏಳ್ಗೆ ಸಹಿಸಲಿಲ್ಲ, ಅದಕ್ಕಾಗಿ ನಾನು ನೀರಾವರಿ ಸಚಿವನಾಗಿದ್ದಾಗ ನನ್ನ ಖಾತೆಗೆ ಸರಿಯಾಗಿ ಅನುದಾನ ನೀಡಲಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡ ತಿಳಿಸಿದರು.
ತಾಲೂಕಿನ ಸಾಮಂದಿಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ತಮ್ಮ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ನಾರಾಯಣಪುರ ಹಾಗೂ ಆಲಮಟ್ಟಿ ಜಲಾಶಯಕ್ಕೆ ಸಂಬಂಧಿಸಿದಂತೆ ಆಭಾಗದ ಜನತೆ ಇಂದಿರಾಗಾಂಧಿ ಅವರನ್ನು ಚಿನ್ನದಲ್ಲಿ ತೂಗಿದರೂ ಅನುದಾನ ಬಿಡುಗಡೆ ಮಾಡಲಿಲ್ಲ. ನಾನು ನೀರಾವರಿ ಸಚಿವನಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮುಖ್ಯಮಂತ್ರಿ ಹೆಗ್ಗಡೆ ಅವರ ಬಳಿ ಸಹ ಮನವಿ ಮಾಡಿದೆ. ಅವರು ಸ್ಪಂದಿಸಲಿಲ್ಲ ಎಂದರು.
ಉತ್ತರ ಕರ್ನಾಟಕದ ನೀರಾವರಿ ಯೋಜನೆಗೆ ಹಣ ಬಿಡುಗಡೆ ಮಾಡಿದರೆ ನಾನು ಆಭಾಗದಲ್ಲಿ ಜನಪ್ರಿಯನಾಗುತ್ತೇನೆ ಎಂಬುದು ಹೆಗ್ಗಡೆ ಅವರ ಕಲ್ಪನೆಯಾಗಿತ್ತು. ಅದಕ್ಕಾಗಿ ಅವರು ಅನುದಾನ ನೀಡಲಿಲ್ಲ ಎಂದು ತಿಳಿಸಿದ ಗೌಡರು ನಾನು ಮುಖ್ಯಮಂತ್ರಿ ಯಾದ ಬಳಿಕ ಪ್ರತಿ ವರ್ಷ ಒಂದು ಸಾವಿರ ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಕೃಷ್ಣ ಕೊಳ್ಳದ ಯೋಜನೆಗಳನ್ನು ಜಾರಿಗೆ ತಂದೆ ಎಂದರು.
ಅನುದಾನಕ್ಕಾಗಿ  2ಬಾರಿ ರಾಜೀನಾಮೆ ನೀಡಿದ್ದೆ: ನಾನು ನೀರಾವರಿ ಸಚಿವನಾದಾಗ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆ ನನಗೆ ಅನುದಾನ ನೀಡಲಿಲ್ಲ. ನಾನು ಎರಡು ಬಾರಿ ರಾಜೀನಾಮೆ ನೀಡಿ ಕಾವೇರಿ ಕೊಳ್ಳಕ್ಕೆ 100 ಕೋಟಿ ರೂ. ಕೃಷ್ಣ ಕೊಳ್ಳಕ್ಕೆ 200 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿದೆ ಎಂದು ಸ್ಮರಿಸಿಕೊಂಡರು.
ಹೆಗ್ಗಡೆ ಗೆಲ್ಲಿಸಲು ನಾನೇ ಬೇಕಾಯ್ತು: 1983 ರಲ್ಲಿ ರಾಮಕೃಷ್ಣ ಹೆಗ್ಗಡೆ ಮುಖ್ಯಮಂತ್ರಿಯಾದಾಗ ಅವರು ಶಾಸಕರಾಗಿರಲಿಲ್ಲ.  ಅವರು ಎಲ್ಲಾ ಕ್ಷೇತ್ರವನ್ನು ಹುಡುಕಾಡಿದರು, ಕೊನೆಗೆ ನನಗೆ ದುಂಬಾಲು ಬಿದ್ದು ಏನಾದರೂ ಮಾಡು ಎಂದು ಮನವಿ ಮಾಡಿದರು. ಆಗ ನಾನು ಕನಕಪುರ ಶಾಸಕರಾಗಿದ್ದ ಸಿಂಧ್ಯಾರನ್ನು ರಾಜೀನಾಮೆ ಕೊಡಿಸಿ ಹೆಗ್ಗಡೆ ಗೆಲುವಿಗೆ ಸಹಕರಿಸಿದೆ ಎಂದು ತಿಳಿಸಿದರು.
ಸ್ವಾಮೀಜಿ ಜತೆ ಭಿನ್ನಾಭಿಪ್ರಾಯ ಇತ್ತು: ಆದಿಚುಂಚನಗರಿ ಮಠಾಧೀಶ ಬಾಲಗಂಗಾಧರ ನಾಥ ಶ್ರೀ ಗಳು ನನ್ನನ್ನು ಆಶೀರ್ವದಿಸಿದ್ದಾರೆ. ಅವರು ಸಹಕಾರ ನೀಡಿದ್ದಾರೆ. ನನ್ನ ಮತ್ತು ಅವರ ನಡುವೆ ಕೆಲ ಕಾಲ ಭಿನ್ನಾಭಿಪ್ರಾಯ ಇದಿದ್ದು ನಿಜ, ನಾನು ಯಾವುದನ್ನೂ ಮುಚ್ಚಿಕೊಳ್ಳುವುದಿಲ್ಲ, ಹಾಗೇ ಆ ವಿಚಾರದ ಬಗ್ಗೆ ಹೆಚ್ಚು ಚರ್ಚೆ ಮಾಡಲು ಇಷ್ಟಪಡುವುದಿಲ್ಲ ಎಂದರು.

ಗೌಡ ಎಂದು ಯಾಕಾದರೂ ಹೆಸರು ಇಟ್ಟರೋ.. ನನ್ನ ರಾಜಕೀಯ ಜೀವನದಲ್ಲಿ ನಾನು ಎಂದಿಗೂ ಯಾವುದೇ ಜಾತಿಯನ್ನು ಗುರಿಯಾಗಿಸಿಕೊಂಡು ಯೋಜನೆ ರೂಪಿಸಿಲ್ಲ, ಎಲ್ಲಾ ಜಾತಿಯ ಬಡವರು, ನೊಂದವರಿಗೆ ಅನುಕೂಲ ಮಾಡುವ ಕೆಲಸ ಮಾಡಿದ್ದೇನೆ ಆದರೆ ಕೆಲ ಮಂದಿ ನಾನು ಮತ್ತು ನನ್ನ ಕುಟುಂಬವನ್ನು ಸಹಿಸಿಕೊಳ್ಳುತ್ತಿಲ್ಲ ಎಂದು ದೇವೇಗೌಡರು ಬೇಸರ ವ್ಯಕ್ತಪಡಿಸಿದರು.
ನಾನು ಒಕ್ಕಲಿಗ ಎಂಬ ಕಾರಣಕ್ಕೆ ಕೆಲ ಮಂದಿ ನನ್ನನ್ನು ಒಪ್ಪಿಕೊಳ್ಳುತ್ತಿಲ್ಲ ಎನಿಸುತ್ತದೆ. ಯಾಕಾದರೂ ನನ್ನ ತಂದೆ ನನಗೆ ಗೌಡ ಎಂದು ಹೆಸರಿಸಿದರೋ ಎಂದು ಒಮ್ಮೊಮ್ಮೆ ಅನಿಸುತ್ತದೆ ಆದರೂ  ಸಾಮಾನ್ಯ ರೈತನ ಮಗನಾಗಿ ನಾನು 60 ವರ್ಷಗಳ ಸುಧೀರ್ಘ ರಾಜಕೀಯ ಜೀವನ ನಡೆಸಿದ್ದೇನೆ. ನಾನು ಏನಾಗಿದ್ದೇನೆ ಎಂಬುದು ವಿಧಿಯಾಟ ಎಂದು ತಿಳಿಸಿದರು.


ನನ್ನ ಮಗನ ಮೇಲೆ ಯಾಕಿಷ್ಟು ಅಸೂಹೆ..? ನಮ್ಮ ಕುಟುಂಬದವರು ಅಧಿಕಾರದಲ್ಲಿರುವುದನ್ನು ಕೆಲವರಿಗೆ ಯಾಕೆ ಸಹಿಸಲಾಗುತ್ತಿಲ್ಲ..?  ಇದು ಕುಮಾರಸ್ವಾಮಿ  ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿರುವ ಮಂದಿಗೆ ಮಾಜಿ ಪ್ರಧಾನಿ ದೇವೇಗೌಡರ ಪ್ರಶ್ನೆ.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುವುದು ಕೆಲವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ, ನಮ್ಮ ಕುಟುಂಬದ ವಿರುದ್ಧವೇ ಏಕೆ ಇಂತಹ ಅಸಹನೆ ಎಂದು ಬೇಸರ ವ್ಯಕ್ತಪಡಿಸಿದರು.


ಅದೃಷ್ಟದ ಮುಖ್ಯಮಂತ್ರಿ: ನಮ್ಮ ಪಕ್ಷಕ್ಕೆ ಈ ರಾಜ್ಯದ ಜನತೆ ಸ್ವಂತ ಬಲದ ಮೇಲೆ ಅಧಿಕಾರ ನಡೆಸುವ ಶಕ್ತಿ ನೀಡಲಿಲ್ಲ. 37 ಜನರನ್ನು ಇರಿಸಿಕೊಂಡು ನಾವು ಅಧಿಕಾರ ನಡೆಸಲು ಸಾಧ್ಯವಿರಲಿಲ್ಲ. ನಾನು ನನ್ನ ಮಗ ಮುಖ್ಯಮಂತ್ರಿ ಯಾಗಲು ಒಪ್ಪಿಯೂ ಇರಲಿಲ್ಲ. ಆದರೆ ಕಾಂಗ್ರೆಸ್ ಪಕ್ಷದ ದೆಹಲಿ ನಾಯಕರು ಕುಮಾರಸ್ವಾಮಿ ಮುಖ್ಯಮಂತ್ರಿ ಆಗ ಬೇಕೆಂದು ಫರ್ಮಾನು ಹೊರಡಿಸಿದ ಪರಿಣಾಮ ಕಾಂಗ್ರೆಸ್ ನವರು ಅಧಿಕಾರ ನೀಡಿದರು, ಅವನು ಸಿಎಂ ಆಗಿರುವುದು ದೈವೇಚ್ಛೆ ಎಂದು ಅಭಿಪ್ರಾಯಪಟ್ಟರು.
ಸಹನೆ ಯಾಕಿಲ್ಲ: ಚುನಾವಣೆಯಲ್ಲಿ ನಾವು ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದು ನಿಜ, ಕುಮಾರಸ್ವಾಮಿ ಈಗಲೂ ಕೊಟ್ಟ ಮಾತಿಗೆ ಬದ್ದವಾಗಿದ್ದಾರೆ. ಆದರೆ ಮೈತ್ರಿ ಸರ್ಕಾರದಲ್ಲಿ ನಮ್ಮ ಪ್ರಣಾಳಿಕೆ ಜಾರಿಗೆ ತರಲು ಸ್ವಲ್ಪ ಸಮಯ ಬೇಕು. ನನ್ನ ಮಗ ಪ್ರಮಾಣ ವಚನ ಸ್ವೀಕರಿಸಿದ ಒಂದೇ ದಿನದಲ್ಲಿ ಸಾಲ ಮನ್ನಾ ಮಾಡಿ ಎಂದು ಪ್ರತಿಭಟನೆ ನಡೆಸಿದರು. ಇವರಿಗೆ ಸ್ವಲ್ಪಕಾಲ ಕಾಯುವ ಸಹನೆ ಯಾಕಿರಲಿಲ್ಲ ಎಂದು ಪ್ರಶ್ನಿಸಿದರು.


ನನ್ನ ಮಗ ಉತ್ತಮ ಆಡಳಿತ ನೀಡುತ್ತಿದ್ದಾನೆ: ವಿಧವಾ ವೇತನ, ಗರ್ಭಿಣಿ ಮತ್ತು ಬಾಣಂತಿಯರಿಗೆ ಭತ್ಯೆ, ಮಹಿಳಾ ಮೀಸಲಾತಿ ಸೇರಿದಂತೆ ಸಾಕಷ್ಟು ಜನಪರ ಯೋಜನೆಗಳನ್ನು ನಾನು ಅಧಿಕಾರದಲ್ಲಿದ್ದಾಗ ಜಾರಿಗೆ ತಂದಿದ್ದರ ಹಿಂದೆ ನಾನು ತಳ್ಳಮಟ್ಟದ ಜನರ ನೋವು ಕಷ್ಟವನ್ನು ಅರಿತ ಅನುಭವ ಕಾರಣವಾಯಿತು. ನನ್ನ ಮಗ ಕುಮಾರಸ್ವಾಮಿ ಸಹ ಜನಪರ ಆಡಳಿತ ನೀಡುತ್ತಿದ್ದಾನೆ, ಈ ಬಗ್ಗೆ ನನಗೆ ತೃಪ್ತಿ ಇದೆ ಎಂದರು.
ವೃದ್ಧರಿಗೆ ತಿಂಗಳಿಗೆ 500 ರೂ. ಹಣ ನೀಡಿದ್ದು ನನ್ನ ಮಗ, ಮುಂದಿನ ದಿನಗಳಲ್ಲಿ ವಯಸ್ಸಾದ ರೈತರಿಗೆ 5 ಸಾವಿರ ರೂ. ಹಣ ನೀಡಬೇಕು ಎಂಬ ಉದ್ದೇಶವನ್ನು ಕುಮಾರಸ್ವಾಮಿ ಹೊಂದಿದ್ದಾನೆ. ಒಳ್ಳೆಯ ಆಡಳಿತ ನೀಡುತ್ತಾನೆ ಸಹನೆಯಿಂದ ಕಾಯ್ದು ನೋಡಿ ಎಂದು ತಿಳಿಸಿದರು.
ಬಡವರ ಬಂಧು ಯೋಜನೆ ಎಲ್ಲಿದೆ? : ಮೀಟರ್ ಬಡ್ಡಿ ದಂಧೆ ಕೋರರಿಂದ ರಸ್ತೆ ಬದಿಯ ಬಡ ವ್ಯಾಪಾರಿಗಳು ನರಳುತ್ತಿದ್ದನ್ನು ಕಂಡು ಅವರಿಗೆ ನೆರವು ನೀಡುವ ಉದ್ದೇಶದಿಂದ ನನ್ನ ಮಗ ಅವರಿಗೆ 10 ಸಾವಿರ ರೂ. ಸಾಲ ನೀಡುವ ಬಡವರಬಂಧು ಯೋಜನೆಯನ್ನು ಜಾರಿಗೆ ತಂದಿದ್ದಾನೆ ದೇಶದ ಯಾವ ರಾಜ್ಯದಲ್ಲಿ ಇಂತಹ ಯೋಜನೆ ಇದೆ ಎಂದು ದೇವೇಗೌಡರು ಪ್ರಶ್ನಿಸಿದರು.

ರೈತರು ಸತ್ತರೆ ನನ್ನ ಮಗನ ಮೇಲೇಕೆ ದೋಷ: ರೈತರ ಸಾಲ ಮನ್ನಾ ಮಾಡಬೇಕು ಎಂಬ ವಿಚಾರದಲ್ಲಿ ಕುಮಾರಸ್ವಾಮಿ ಬದ್ದವಾಗಿದ್ದಾರೆ. ಈಗಾಗಲೇ ಶೆಡ್ಯೂಲ್ಡ್ ಬ್ಯಾಂಕ್‍ಗಳಿಗೆ ನಾಲ್ಕು ಕಂತುಗಳಲ್ಲಿ ಸಾಲದ ಹಣ ಕಟ್ಟಿಕೊಡುವುದಾಗಿ ತಿಳಿಸಿದ್ದಾರೆ. ರೈತರು ಯಾವುದೋ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡರೆ ನನಗೆ ಏಕೆ ದೋಷ ಕೊಡ್ತೀರಿ ಎಂದು ಪ್ರಶ್ನಿಸಿದರು.
ನನಗೂ ಈಗೇ ಆಗಿತ್ತು: ವೀರೇಂದ್ರ ಪಾಟೀಲ್, ರಾಮಕೃಷ್ಣ ಹೆಗ್ಗಡೆ ಕಾಲದಲ್ಲಿ ನನ್ನ ಬಗ್ಗೆ ಇಡೀ ರಾಜ್ಯದ ಜನತೆ ಮಮತೆ ಮತ್ತು ಮಮಕಾರ ತೋರುತ್ತಿದ್ದರು. ಆದರೆ ನಾನು ಅಧಿಕಾರಕ್ಕೆ ಬಂದ ಬಳಿಕ ನನ್ನನ್ನು ಸಹಿಸಲಿಲ್ಲ. ನನ್ನ ಮಗ ಮುಖ್ಯಮಂತ್ರಿಯಾಗುವದನ್ನೂ ಕೆಲವರು ಸಹಿಸುತ್ತಿಲ್ಲ ಯಾಕೆ ಹೀಗೆ ಎಂದು ಬೇಸರ ವ್ಯಕ್ತಪಡಿಸಿದರು.


ನನ್ನ ಸೇವೆ ಮಕ್ಕಳು ಮುಂದುವರೆಸಿದ್ದಾರೆ: ನನ್ನದು ಸಣ್ಣ ಕುಟುಂಬ, ನಾನು ಹೀಗೆ ಆಗಬೇಕೆಂದು ಎಣಿಸಿದವನಲ್ಲ, ಬಡವರಿಗೆ ಸೇವೆ ಮಾಡಬೇಕು, ನೊಂದವರಿಗೆ ನ್ಯಾಯ ಸಲ್ಲಿಸ ಬೇಕು ಎಂಬ ಉದ್ದೇಶದಿಂದ ರಾಜಕೀಯ ಆರಂಭಿಸಿದವನು ನಾನು. ನನ್ನಮಕ್ಕಳು ರಾಜಕೀಯಕ್ಕೆ ಬರಲಿ ಎಂದು ನಾನು ಎಂದೂ ಬಯಸಿಲ್ಲ ನನ್ನ ಸೇವೆಯನ್ನು ನನ್ನ ಮಕ್ಕಳು ಮುಂದುವರೆಸುತ್ತಿರುವುದು ಸಂತಸದ ಸಂಗತಿ ಎಂದರು.

ನನ್ನ ರಾಜಕೀಯ ಜೀವನ ಇನ್ನೂ ಮುಗಿದಿಲ್ಲ, ಈ ಜನರಿಗಾಗಿ ನಾನು ಇನ್ನೂ ನಾಲ್ಕಾರು ವರ್ಷ ಹೋರಾಟ ನಡೆಸುತ್ತೇನೆ, ಸುಲಭವಾಗಿ ಬಿಡುವವನು ನಾನಲ್ಲ ಎಂದು ಹೇಳುವ ಮೂಲಕ ಮಾಜಿ ಪ್ರಧಾನಿ ದೇವೇಗೌಡ ತಮ್ಮ ರಾಜಕೀಯ ಜೀವನ ಮುಂದುವರೆಸುವ ಸುಳಿವು ನೀಡಿದರು.
ತಾಲೂಕಿನ ಸಾಮಂದಿಪುರ ಗ್ರಾಮದಲ್ಲಿ ತಮ್ಮ ಪ್ರತಿಮೆ ಅನಾವರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾನು 60 ವರ್ಷಗಳ ರಾಜಕೀಯ ಜೀವನದಲ್ಲಿ ನೊಂದವರಿಗೆ ಸ್ಪಂದಿಸುವ ಕೆಲಸ ಮಾಡಿದ್ದೇನೆ, ಈ ಭಾಗದ ಜನತೆ ಮಾಡಿದ ಸಣ್ಣ ಕೆಲಸಕ್ಕೆ ಇಷ್ಟೋಂದು ಅಭಿಮಾನ ತೋರುತ್ತಿದ್ದೀರಿ ಇದಕ್ಕೆ ನಾನು ಚಿರಋಣಿ ಎಂದರು.
 ನಿಮ್ಮ ಸೇವೆ ಮಾಡಲು ನಾನು ಇಂದಿಗೂ ಸಿದ್ದವಾಗಿದ್ದೇನೆ, ಇಗ್ಗಲೂರಿನಲ್ಲಿ ಬ್ಯಾರೇಜ್ ನಿರ್ಮಿಸಿದ್ದರಿಂದ ಕೆಲ ಕೆರೆಗಳು ತುಂಬಿವೆ, ಇನ್ನಷ್ಟು ಕೆರೆಗಳು ತುಂಬಬೇಕಿವೆ. ಇಲ್ಲಿನ ನೀರಾವರಿ ಯೋಜನೆಗೆ ಇನ್ನೂ ಕೆಲ ತೊಡಕುಗಳಿವೆ. ಅದನ್ನು ನಾನು ನಿವಾರಿಸಕೊಡುತ್ತೇನೆ ಎಂದು ವಾಗ್ದಾನ ನೀಡಿದರು.
ಕಾವೇರಿ ನದಿಯಲ್ಲಿ 284 ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳುವಂತೆ ನಮಗೆ ಅಂತಿಮ ತೀರ್ಪಿನಲ್ಲಿ ಅವಕಾಶ ನೀಡಲಾಗಿದೆ. ಆದರೆ ತಮಿಳುನಾಡು ನೀರು ಎತ್ತ ಬೇಡಿ ಎನ್ನುತ್ತದೆ. ನಮ್ಮ ಪಾಲಿನ ನೀರಿನ ಹಕ್ಕನ್ನು ನಾವು ಯಾವರೀತಿಯಾದರೂ ಬಳಸಿಕೊಳ್ಳುತ್ತೇವೆ ಎಂಬುದನ್ನು ತಿಳಿಸಿ ಹೇಳ ಬೇಕಿದೆ. ಆಕೆಲಸವನ್ನು ನಾನು ಮಾಡುತ್ತೇನೆ ಎಂದರು.
 

ಜನ್ಮಜನ್ಮಾಂತರದ ಸಂಬಂಧ :  ನಾನು ಹಾಸನ ಜಿಲ್ಲೆಯಲ್ಲಿ ಹುಟ್ಟಿದ್ದಾದರೂ ನನ್ನ ಕರ್ಮ ಭೂಮಿ ಈ ಜಿಲ್ಲೆ. ನನ್ನ ಕಷ್ಟದ ದಿನಗಳಲ್ಲಿ,ಒಳಿತು ಕೆಡುಕಿನಲ್ಲಿ ನೀವು ನನ್ನ ಜತೆ ನಿಂತಿದ್ದೀರಿ. ನಾನು ಮುಖ್ಯಮಂತ್ರಿಯಾಗಿದ್ದು, ನನ್ನ ಮಗ ಮುಖ್ಯಮಂತ್ರಿಯಾಗಿದ್ದು ಈ ಜಿಲ್ಲೆಯಿಂದಲೇ, ನನಗೂ ಈ ಜಿಲ್ಲೆಗೂ ಪೂರ್ವಜನ್ಮದ ಸಂಬಂಧ ಇದೆ ಎಂದು ಅಭಿಪ್ರಾಯಪಟ್ಟರು.

ನನ್ನನ್ನೇ ಭೇಟಿಮಾಡಿ: ಈ ಜಿಲ್ಲೆಯ ನಾಲ್ಕು ತಾಲೂಕಿನ ಜನತೆ ನನ್ನನ್ನು ರಾಜಕೀಯವಾಗಿ ಮೇಲೆತ್ತಿದ್ದೀರಿ. ನನ್ನ ಸೊಸೆ ಕೇವಲ ರಾಮನಗರ ಶಾಸಕಿಯಲ್ಲ, ಇಡೀ ಜಿಲ್ಲೆಯ ಜನರ ಸೇವೆ ಮಾಡಲು ಸಿದ್ದವಿದ್ದಾರೆ. ನಿಮ್ಮ ಸಮಸ್ಯೆಗಳಿದ್ದರೆ ಖುದ್ದಾಗಿ ನೀವೇ ಬಂದು ನನ್ನನ್ನು ಭೇಟಿಮಾಡಿ ಸ್ಪಂದಿಸಲು ನಮ್ಮ ಕುಟುಂಬ ಸಿದ್ದವಿದೆ ಎಂದು ತಿಳಿಸಿದರು.

ಈ ತಾಲೂಕಿನ ಜನತೆ ದೇವೇಗೌಡರ ಬಗ್ಗೆ ನಮ್ಮ ಕುಟುಂಬದ ಬಗ್ಗೆ ತೋರುತ್ತಿರುವ ಅಭಿಮಾನಕ್ಕೆ ನಾವು ಅಬಾರಿಗಳಾಗಿದ್ದು, ಜರ ಋಣ ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ರಾಮನಗರ ಶಾಸಕಿ ಅನಿತಾಕುಮಾರಸ್ವಾಮಿ ವಾಗ್ದಾನ ನೀಡಿದರು.
ಈ ರಾಜ್ಯದ ರೈತರ, ನೊಂದವರ ಒಳಿತಿಗಾಗಿ ದುಡಿಯುತ್ತಿರುವ ದೇವೇಗೌಡರು ನಮ್ಮ ಮಾವ ಎಂಬುದು ಹೆಮ್ಮೆಯ ಸಂಗತಿ. ನನ್ನ ಪತಿ ಸಹ ಇವರ ಮಾರ್ಗದರ್ಶನದಲ್ಲೇ ಸಾಗುತ್ತಿದ್ದಾರೆ ಎಂದು ತಿಳಿಸಿದರು.
ಅತ್ಯಲ್ಪಕಾಲ ಅಧಿಕಾರ ನಡೆಸಿದರೂ ಅವರು ನೀಡಿದ ಕೊಡುಗೆ ಅನನ್ಯವಾದದ್ದು, ಸತತ ಪರಿಶ್ರಮ, ನೊಂದವರ ಬಗೆಗೆ ಅವರು ಇಟ್ಟಿರುವ ಅಪಾರ ಕಾಳಜಿ ನಿಜಕ್ಕೂ ಅನುಕರಣಾರ್ಹ. ಇಂದಿಗೂ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸಮಸ್ಯೆಗಳಿಗೆ ಮುಕ್ತವಾಗಿ ಸಲಹೆ ನೀಡುವ ಇವರ ಕಳಕಳಿ ಎಲ್ಲರಿಗೂ ಮಾದರಿಯಾಗ ಬೇಕು ಎಂದು ಅಭಿಪ್ರಾಯಪಟ್ಟರು.
 

ಚಿರಸ್ಥಾಯಿಯಾಗಲಿ: ಕಾರ್ಯಕ್ರಮದಲ್ಲಿ ಮಾತನಾಡಿದ  ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್, ಮಾಜಿ ಪ್ರಧಾನಿ ದೇವೇಗೌಡರು ಈ ನಾಡಿನ ಹೆಮ್ಮೆಯ ರಾಜಕಾರಣಿ. ಇವರ ಪ್ರತಿಮೆಯನ್ನು ಸ್ಥಾಪಿಸುವ ಮೂಲಕ ಇಡೀ ರಾಜ್ಯ ಸ್ಮರಿಸಿಕೊಳ್ಳುವ, ಮುಂದಿನ ಪೀಳಿಗೆಗೆ ತಿಳಿಸಿ ಹೇಳುವ ಕೆಲಸ ಮಾಡಲು ಮುಂದಾಗಿದ್ದು ನಿಜಕ್ಕೂ ಒಳ್ಳೆಯ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಶ್ವಮಾನವರಾಗಿಸಿ: ದೇವೇಗೌಡರನ್ನು ಕೇವಲ ಒಕ್ಕಲಿಗ ಸಮುದಾಯಕ್ಕೆ ಸೀಮಿತ ಗೊಳಿಸುವ ಕೆಲಸ ಬೇಕಿಲ್ಲ. ಅವರನ್ನು ಕುವೆಂಪು ಅವರ ಆಶಯದಂತೆ ವಿಶ್ವಮಾನವರಾಗಿಸಲು ನಾವೆಲ್ಲ ಮುಂದಾಗ ಬೇಕಿದೆ. ಅವರು ಜನ್ಮತಃ ಒಕ್ಕಲಿಗರಾದರೂ ಅವರ ಸೇವೆ ಇಡೀ ರಾಷ್ಟ್ರಕ್ಕೆ ಸಲ್ಲಿದೆ. ಅವರು ಈ ನಾಡು ಕಂಡ ಮಾಹಾನ್ ನಾಯಕ ಎಂದು ಆದಿಚುಂಚನಗಿರಿ ಶಾಖಾ ಮಠದ ಅನ್ನದಾನೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.


ಗುರುಗುಂಡ ಬ್ರಹ್ಮೇಶ್ವರ ಸಂಸ್ಥಾನದ ಶ್ರೀ ನಂಜಾವದೂತ ಸ್ವಾಮೀಜಿ ಕಂಚಿನ ಪ್ರತಿಮೆ ಅನಾವರಣ ಗೊಳಿಸಿದರು.
ಸಾವಿರಾರು ಜನಸಮ್ಮುಖದಲ್ಲಿ ಕಂಚಿನ ಪ್ರತಿಮೆ ಅನಾವರಣಗೊಳ್ಳುತ್ತಿದ್ದಂತೆ ದೇವೇಗೌಡರ ಅಭಿಮಾನಿಗಳು, ಜೆಡಿಎಸ್ ಕಾರ್ಯಕರ್ತರು ಜಯಘೋಷ ಮೊಳಗಿಸಿ ಅಭಿಮಾನದ ನಾಯಕನಿಗೆ ಗೌರವ ಸೂಚಿಸಿದರು. ಕೆಲ ಅಭಿಮಾನಿಗಳು ದೇವೇಗೌಡರಿಗೆ ಹೂ ಎರಚಿ ತಮ್ಮ ಅಭಿಮಾನ ಮೆರೆದರು.

ಚನ್ನಪಟ್ಟಣ ಮತ್ತು ಮಳವಳ್ಳಿ ತಾಲೂಕಿನ ಗಡಿ ಗ್ರಾಮ ಸಾಮಂದಿಪುರದ ಶಿಂಷಾನದಿ ದಂಡೆಯಲ್ಲಿ ದೇವೇಗೌಡರ ಅಭಿಮಾನಿ ಬಳಗ ಪ್ರತಿಮೆಯನ್ನು ನಿರ್ಮಿಸಿದ್ದು, ಇದು ರಾಜ್ಯದಲ್ಲೇ ಸ್ಥಾಪಿಸಿರುವ ಮಾಜಿ ಪ್ರಧಾನಿಗಳ ಅತಿ ಎತ್ತರದ ಪ್ರತಿಮೆ ಎನಿಸಿದೆ.
ರಾಜ್ಯದ ಸಿಂದಗಿ ಮತ್ತು ತುರುವೆಕೆರೆ ಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಪ್ರತಿಮೆಯನ್ನು ಸ್ಥಾಪಿಸಲಾಗಿದೆಯಾದರೂ ಇಷ್ಟೋಂದು ಎತ್ತರದ ಪ್ರತಿಮೆ ಇಲ್ಲ. ಪ್ರತಿಮೆಯ ಜತೆಗೆ ಬಳಗದ ಕಚೇರಿ ಮತ್ತು ಕಿರು ಗ್ರಂಥಾಲಯವನ್ನು ಸ್ಥಾಪಿಸಲಾಗಿದೆ.
ಪ್ರತಿಮೆಯ ಸುತ್ತಾ ಕಾಂಪೌಂಡ್ ನಿರ್ಮಿಸಲಾಗಿದ್ದು, ಪ್ರತಿಮೆಗೆ ಬಿಸಿಲು ಮತ್ತು ನೆರಳಿನಿಂದ ರಕ್ಷಣೆ ನೀಡಲು ಮೇಲ್ಬಾಗದಲ್ಲಿ ಶೀಟ್‍ಸಹ ಅಳವಡಿಸಲಾಗಿದೆ. ಪ್ರತಿಮೆಯ ಸುತ್ತಾ ಗ್ರಾನೈಟ್ ಅಳವಡಿಸಲಾಗಿದೆ.

ಆದಿ ಚುಂಚನಗಿರಿ ಅರ್ಚಕರಹಳ್ಳಿಯ ಶಾಖಾ ಮಠದ ಶ್ರೀ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ಗಳು ಆಶೀರ್ವಚನ ನೀಡುತ್ತಾ ದೇವೇಗೌಡರು ಕೇವಲ ಒಕ್ಕಲಿಗರ, ಕರ್ನಾಟಕದ ಮತ್ತು ಭಾರತದ ಸ್ವತ್ತಲ್ಲ, ಅವರು ಕುವೆಂಪು ಹೇಳಿದಂತೆ ವಿಶ್ವ ಮಾನವ ಅವರನ್ನು ಇಂದು ಪ್ರಪಂಚದ ಅನೇಕ ಭಾಗಗಳಲ್ಲಿ ಗುರುತಿಸಲ್ಪಡಿತ್ತಿದ್ದಾರೆ, ಇನ್ನು ಮುಂದೆಯೂ ಅವರ ಸೇವೆ ಮತ್ತು ನಾಮ ಜಗತ್ತಿನಾದ್ಯಂತ ಪಸರಿಸಲಿ ಎಂದು ಆಶೀರ್ವದಿಸಿದರು.

ಪ್ರತಿಮೆ ಬೇಡ ಎಂದಿದ್ದ ಗೌಡರು:  ಒಂದು ವರ್ಷಗಳ ಹಿಂದೆ ಪ್ರತಿಮೆ ನಿರ್ಮಾಣ ಸಮಿತಿಯ ಪದಾಧಿಕಾರಿಗಳು ಭೇಟಿ ಮಾಡಿ ಪ್ರತಿ ಅನಾವರಣ ಗೊಳಿಸುವ ವಿಷಯ ತಿಳಿಸಿದಾಗ ನನ್ನ ಪ್ರತಿಮೆ ಬೇಡ, ಈ ದೇಶದಲ್ಲಿ ನನಗಿಂತ ದೊಡ್ಡವರಿದ್ದಾರೆ. ಅವರ ಪ್ರತಿಮೆ ಸ್ಥಾಪಿಸಿ, ಗಾಂಧಿ,ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಿ ನಾನು ಬರುತ್ತೇನೆ ಎಂದು ದೇವೇಗೌಡರು ತಿಳಿಸಿದ್ದಾಗಿ ಈ ಸಂದರ್ಭದಲ್ಲಿ  ಸಮಿತಿಯ ಸಂಚಾಲಕ ಇ.ತಿ.ಶ್ರೀನಿವಾಸ್ ತಿಳಿಸಿದರು.
ಆರಂಭದಲ್ಲಿ ಪ್ರತಿಮೆ ಅನಾವರಣಕ್ಕೆ ಗೌಡರು ಅನುಮತಿ ನೀಡಿರಲಿಲ್ಲ, ಕುಮಾರಸ್ವಾಮಿ ಅವರ ಮೇಲೆ ಒತ್ತಡ ತಂದು, ಅವರಿಂದ ಹೇಳಿಸಿದ ಬಳಿಕ ದೇವೇಗೌಡರು ಒಪ್ಪಿಕೊಂಡರು. ಇಗ್ಗಲೂರಿನ ದೇವೇಗೌಡ ಬ್ಯಾರೇಜ್ ನಿರ್ಮಿಸುವ ಮೂಲಕ ಅನುಕೂಲ ಮಾಡಿಕೊಟ್ಟಿದ್ದನ್ನು ಈ ಭಾಗದ ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಪ್ರತಿಮೆ ಸ್ಥಾಪಿಸಿದ್ದೇವೆ ಎಂದು ಅವರು ಈ ಸಂದರ್ಭದಲ್ಲಿ ಮಾಹಿತಿ ನೀಡಿದರು.

ಮಂಡ್ಯ ಜಿಲ್ಲೆ ಪಾಂಡವಪುರದ ಬಳಿ ನಡೆದ ಧಾರುಣ ಬಸ್ ಅವಘಡದ ಕರಿನೆರಳು ಶನಿವಾರ ಸಾಮಂದಿಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮದ ಮೇಲೆ ಬೀರಿತು.
ಕಾರ್ಯಕ್ರಮ ಬೆಳಿಗ್ಗೆ 11 ಗಂಟೆಗೆ ನಿಗಧಿಯಾಗಿತ್ತು. ಮುಖ್ಯಮಂತ್ರಿಗಳು 11.45ಕ್ಕೆ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ಕಚೇರಿಯ ಅಧಿಕೃತ ಪ್ರಕಟಣೆ ಸಹ ತಿಳಿಸಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ತೆರಳಿದ ಸಿಎಂ ಕುಮಾರಸ್ವಾಮಿ 1 ಗಂಟೆಯ ಸುಮಾರಿಗೆ ನಗರಕ್ಕೆ ಆಗಮಿಸಿದರಾದರೂ ಅವಘಡದ ಸುದ್ದಿ ತಿಳಿಯುತ್ತಿದ್ದಂತೆ ಕಾರ್ಯಕ್ರಮಕ್ಕೆ ಬರದೆ ನೇರವಾಗಿ ಮಂಡ್ಯದತ್ತ ತೆರಳಿದರು.
ಮುಖ್ಯಮಂತ್ರಿ ಮಂಡ್ಯಕ್ಕೆ ತೆರಳುತ್ತಿದ್ದಂತೆ ಸಾಮಂದಿಪುರ ಗ್ರಾಮದಲ್ಲಿ ಹಮ್ಮಿಕೊಂಡಿಕಾರ್ಯಕ್ರಮದ ಮೇಲೆ ಅವಘಡದ ಸೂತಕದ ಛಾಯೆ ಕವಿದಿತ್ತು. 2.30ರ ಸುಮಾರಿಗೆ ಮಾಜಿ ಪ್ರಧಾನಿ ದೇವೇಗೌಡರು ಗ್ರಾಮಕ್ಕೆ ಆಗಮಿಸಿ ಸರಳವಾಗಿ ಪ್ರತಿಮೆಯನ್ನು ಅನಾವರಣ ಗೊಳಿಸಿ ಕಾರ್ಯಕ್ರಮವನ್ನು ಮುಗಿಸಿದರು.


ಕಾರ್ಯಕ್ರಮ ಆರಂಭ ವಾಗುತ್ತಿದ್ದಂತೆ ಬಸ್ ಅವಘಡದಲ್ಲಿ ಮೃತರಾದ ಪ್ರಯಾಣಿಕರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೆಲ ಕಾಲ ಮೌನ ಆಚರಿಸಲಾಯಿತು. ಕುಮಾರಸ್ವಾಮಿ ಈ ಕಾರ್ಯಕ್ರಮಕ್ಕೆ ಬರಬೇಕಾಗಿತ್ತು, ಆದರೆ ಅಪಘಾತದಲ್ಲಿ ನೊಂದವರಿಗೆ ಸಾಂತ್ವಾನ ಹೇಳಲು ತೆರಳಿದ್ದಾರೆ ಎಂದು ದೇವೇಗೌಡರು, ಅನಿತಾಕುಮಾರಸ್ವಾಮಿ ತಿಳಿಸಿದರು.

ಕಾರ್ಯಕ್ರಮದಲ್ಲಿ  ವಿಶ್ವ ಒಕ್ಕಲಿಗ ಮಠದ ಶ್ರೀ ಚಂದ್ರಶೇಖರ ನಾಥ ಸ್ವಾಮೀಜಿ, ಶಾಸಕ ಅನ್ನದಾನಿ, ವಿಧಾನಪರಿಷತ್ ಸದಸ್ಯ ಶರವಣ, ಮಾಜಿ ಶಾಸಕ ಎಂ.ಸಿ.ಅಶ್ವತ್ಥ್, ಮುಖಂಡರಾದ ಲಕ್ಷ್ಮಿ ಅಶ್ವಿನ್‍ಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ಜಯಮುತ್ತು, ಬಮೂಲ್ ನಿರ್ದೇಶಕ ಎಸ್.ಲಿಂಗೇಶ್‍ಕುಮಾರ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.


 


 

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ಚರ್ಮ ಕುಶಲ ಕರ್ಮಿಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ
ಚರ್ಮ ಕುಶಲ ಕರ್ಮಿಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ

ಬೆಂಗಳೂರು:ಮೇ/೦೮/೨೦/ಶುಕ್ರವಾರ. ಕೊರೊನಾ (ಕೋವಿಡ್-೧೯) ರ ಪರಿಣಾಮ ಹಾಗೂ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ರಸ್ತೆ ಬದಿಯಲ್ಲಿ ಚರ್ಮ

ಕೊರೊನಾ (ಕೋವಿಡ್-೧೯) ದಿಂದಾಗಿ ನಷ್ಟ ಅನುಭವಿಸಿದವರಿಗೆ ೧,೬೧೦ ಕೋಟಿ ರೂ ಪರಿಹಾರ ಘೋಷಿಸಿದ ಸರ್ಕಾರ
ಕೊರೊನಾ (ಕೋವಿಡ್-೧೯) ದಿಂದಾಗಿ ನಷ್ಟ ಅನುಭವಿಸಿದವರಿಗೆ ೧,೬೧೦ ಕೋಟಿ ರೂ ಪರಿಹಾರ ಘೋಷಿಸಿದ ಸರ್ಕಾರ

ಕಳೆದ ಒಂದೂವರೆ ತಿಂಗಳಿನಿಂದ ಲಾಕ್ ಡೌನ್ ನ ಪರಿಣಾಮವಾಗಿ ವಿವಿಧ ನಿರ್ಬಂಧಗಳನ್ನು ಹೇರಿರುವುದರಿಂದ ಎಲ್ಲಾ ವರ್ಗದ ಜನರು ಆರ್ಥಿಕವಾಗಿ ಸಂಕಷ್ಟವನ್ನು ಅನುಭವಿಸುತ್ತಾರೆ.


ಲಾಕ

ವಲಸೆ ಕಾರ್ಮಿಕರಿಗೆ ಉಚಿತ ಬಸ್ ಸೌಲಭ್ಯ: ಇನ್ನೂ ಎರಡು ದಿನ ವಿಸ್ತರಿಸಿದ ಮುಖ್ಯಮಂತ್ರಿ
ವಲಸೆ ಕಾರ್ಮಿಕರಿಗೆ ಉಚಿತ ಬಸ್ ಸೌಲಭ್ಯ: ಇನ್ನೂ ಎರಡು ದಿನ ವಿಸ್ತರಿಸಿದ ಮುಖ್ಯಮಂತ್ರಿ

ಬೆಂಗಳೂರು:ಮೇ/೦೪/೨೦/ಸೋಮವಾರ. ವಲಸೆ ಕಾರ್ಮಿಕರಿಗೆ ಪ್ರಕಟಿಸಿರುವ ಉಚಿತ ಬಸ್ ಪ್ರಯಾಣ ಸೌಲಭ್ಯ ಸುಗಮವಾಗಿ ನಡೆಯುತ್ತಿದ್ದು, ಅದನ್ನು ಇನ್ನು ಎರಡು

ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಆನ್‌ಲೈನ್ ತರಗತಿಗಳು ಪ್ರಾರಂಭ ಡಾ ವಿಜಯ ಪ್ರಕಾಶ
ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಆನ್‌ಲೈನ್ ತರಗತಿಗಳು ಪ್ರಾರಂಭ ಡಾ ವಿಜಯ ಪ್ರಕಾಶ

ರಾಮನಗರ:ಮೇ/೦೩/೨೦/ಭಾನುವಾರ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ೨೦೧೯-೨೦ ನೇ ಶೈಕ್ಷಣಿಕ ಸಾಲಿನ ಜುಲೈ ಮತ್ತು ಜನವರಿ ಆವೃತ್ತಿಯಲ್ಲಿ

ಮೃತ ಹನುಮಂತು ಕುಟುಂಬಕ್ಕೆ ೦೫ ಲಕ್ಷ ರೂ ಚೆಕ್ ನೀಡಿದ ಎಚ್ಡಿಕೆ
ಮೃತ ಹನುಮಂತು ಕುಟುಂಬಕ್ಕೆ ೦೫ ಲಕ್ಷ ರೂ ಚೆಕ್ ನೀಡಿದ ಎಚ್ಡಿಕೆ

ಕನಕಪುರ:ಏ/೨೨/೨೦/ಬುಧವಾರ. ನೆನ್ನೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ರಾಮನಗರ ಜಿಲ್ಲಾ ಪಬ್ಲಿಕ್ ಟಿವಿ ವರದಿಗಾರ ಹನುಮಂತು ಅವರ ಕುಟುಂಬದ ಸದಸ್ಯ

ಕಾರಿನಲ್ಲಿ ಮದ್ಯ ಸಾಗಣೆ ಚನ್ನಪಟ್ಟಣ ಮಾಕಳಿ ಗ್ರಾಮದ ಮೂವರ ಬಂಧನ
ಕಾರಿನಲ್ಲಿ ಮದ್ಯ ಸಾಗಣೆ ಚನ್ನಪಟ್ಟಣ ಮಾಕಳಿ ಗ್ರಾಮದ ಮೂವರ ಬಂಧನ

ನಾಗಮಂಗಲ:೨೨/೨೦/ಬುಧವಾರ. ಚಾಮರಾಜನಗರ- ಜೇವರ್ಗಿ ರಾಷ್ಟ್ರೀಯ ಹೆದ್ದಾರಿ ನಾಗಮಂಗಲ ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆ ಎದುರಿನ ಚೆಕ್ ಪೋಸ್ಟ್ ನಲ್

ಕಾರ್ಮಿಕರ ವೇತನ ಕಡಿತಕ್ಕೆ ಅವಕಾಶ ನೀಡುವುದಿಲ್ಲ : ಕಾರ್ಮಿಕ ಸಚಿವ ಅರೆಬೈಲ್ ಶಿವರಾಮ ಹೆಬ್ಬಾರ್
ಕಾರ್ಮಿಕರ ವೇತನ ಕಡಿತಕ್ಕೆ ಅವಕಾಶ ನೀಡುವುದಿಲ್ಲ : ಕಾರ್ಮಿಕ ಸಚಿವ ಅರೆಬೈಲ್ ಶಿವರಾಮ ಹೆಬ್ಬಾರ್

ಬೆಂಗಳೂರು:ಏ/೧೯/೨೦/ಭಾನುವಾರ. ಕಾರ್ಮಿಕರದ್ದಾಗಲೀ ಅಥವಾ ಇತರೆ ಯಾವುದೇ ಕಾರ್ಮಿಕರದ್ದಾಗಲೀ ವೇತನ ಕಡಿತಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡುವುದಿಲ್ಲ

ರಾಜ್ಯದಲ್ಲಿನ ಕೊರೊನಾ‌ ಸ್ಥಿತಿಗತಿಯ ಕುರಿತಂತೆ ಸಚಿವ ಸುರೇಶ್ ಕುಮಾರ್‌‌ ಮಾಹಿತಿ
ರಾಜ್ಯದಲ್ಲಿನ ಕೊರೊನಾ‌ ಸ್ಥಿತಿಗತಿಯ ಕುರಿತಂತೆ ಸಚಿವ ಸುರೇಶ್ ಕುಮಾರ್‌‌ ಮಾಹಿತಿ

ಇದುವರೆಗೆ ರಾಜ್ಯದಲ್ಲಿ ಒಟ್ಟಾರೆ ೩೫೯ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಇಂದು ಸಂಜೆ ೦೫:೦೦ ರ ಮಾಹಿತಿಯಂತೆ ೧೩ ಜನ ಸಾವನ್ನಪ್ಪಿದ್ದು, ೮೮ ಮಂದಿ ಗುಣಮುಖರಾಗಿ ಹಿಂತಿರುಗಿದ್ದಾರೆಂದು‌ ಸಚಿವರು ವಿವರ

ಹತ್ತನೇ ತರಗತಿ ಹೊರತುಪಡಿಸಿ ಒಂಭತ್ತನೆಯ ತರಗತಿಯ ತನಕ ಎಲ್ಲರೂ ಪಾಸು ಸುರೇಶ್ ಕುಮಾರ್
ಹತ್ತನೇ ತರಗತಿ ಹೊರತುಪಡಿಸಿ ಒಂಭತ್ತನೆಯ ತರಗತಿಯ ತನಕ ಎಲ್ಲರೂ ಪಾಸು ಸುರೇಶ್ ಕುಮಾರ್

ಬೆಂಗಳೂರು/ರಾಮನಗರ/೦೨/೨೦/ಗುರುವಾರ. ೨೦೧೯/೨೦ ನೇ ಶೈಕ್ಷಣಿಕ ಸಾಲಿನ ೭, ೮ ಮತ್ತು ೯ ನೇ ತರಗತಿಯ ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸದೇ ಉತ್ತೀರ್

ನಾವೂ ಹೊರಹೋಗಲ್ಲ, ನೀವು ಬರಬೇಡಿ. ಕೊರೊನಾ ಬಗ್ಗೆ ಎಚ್ಚರಿಕೆ ವಹಿಸಿದ ಕೆಲವು ಗ್ರಾಮಸ್ಥರು
ನಾವೂ ಹೊರಹೋಗಲ್ಲ, ನೀವು ಬರಬೇಡಿ. ಕೊರೊನಾ ಬಗ್ಗೆ ಎಚ್ಚರಿಕೆ ವಹಿಸಿದ ಕೆಲವು ಗ್ರಾಮಸ್ಥರು

ಚನ್ನಪಟ್ಟಣ:ಮಾ/೨೬/೨೦/ಗುರುವಾರ.ಕೊರೊನಾ ವೈರಸ್ ದಿನೇದಿನೇ ಹೆಚ್ಚಾಗುತ್ತಿರುವುದನ್ನು ನಿಧಾನವಾಗಿ ಅರ್ಥೈಸಿಕೊಳ್ಳುತ್ತಿರುವ ಗ್ರಾಮೀಣ ಭಾಗದ ಯುವಕರು ಆರ

Top Stories »  


Top ↑