Tel: 7676775624 | Mail: info@yellowandred.in

Language: EN KAN

    Follow us :


ಕನ್ನಡ ಶಾಲೆಗಳ ‘ದೇಹ’ ಮತ್ತು ‘ಆತ್ಮ’ಗಳೆರಡೂ ಹೊಸ ವಿನ್ಯಾಸವನ್ನು ಪಡೆದುಕೊಳ್ಳಬೇಕಾಗಿದೆ : ಡಾ.ಎಲ್.ಸಿ. ರಾಜು

Posted Date: 01 Feb, 2018

ಕನ್ನಡ ಶಾಲೆಗಳ ‘ದೇಹ’ ಮತ್ತು ‘ಆತ್ಮ’ಗಳೆರಡೂ ಹೊಸ ವಿನ್ಯಾಸವನ್ನು ಪಡೆದುಕೊಳ್ಳಬೇಕಾಗಿದೆ : ಡಾ.ಎಲ್.ಸಿ. ರಾಜು

ರಾಮನಗರ ತಾಲ್ಲೂಕು ಆರನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಎಲ್.ಸಿ.ರಾಜು ಅವರು ಮಾಡಿರುವ ಸಂಪೂರ್ಣ ಭಾಷಣ

 

ಸಹೃದಯ ಸಾಹಿತ್ಯಾಭಿಮಾನಿಗಳೆ, 

ರಾಮನಗರ ತಾಲ್ಲೂಕಿನ ಆರನೆಯ ಕನ್ನಡ ಸಾಹಿತ್ಯ ಸಮ್ಮೇಳನವು ಇಂದು ಅರ್ಥಪೂರ್ಣವಾಗಿ ಆರಂಭಗೊಂಡಿದೆ. ಇದು ರಾಮನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ಟಿ.ದಿನೇಶ್ ಬಿಳಗುಂಬ ಮತ್ತು ಎಲ್ಲಾ ಪದಾಧಿಕಾರಿಗಳ ಕ್ರಿಯಾಶೀಲತೆಯ ಫಲ. ಅತ್ಯಂತ ಕಡಿಮೆ ಅವಧಿಯಲ್ಲಿ ಸಮ್ಮೇಳನವನ್ನು ಆಯೋಜಿಸಿ ಯಶಸ್ವಿಗೊಳಿಸಲು ಇವರೆಲ್ಲರೂ ತೋರಿಸಿರುವ ಆಸಕ್ತಿ ಮತ್ತು ವಹಿಸಿರುವ ಶ್ರಮ ನಿಜಕ್ಕೂ ಅಭಿನಂದನೀಯ. ಇವರ ಬೆಂಬಲಕ್ಕೆ ನಿಂತು ಬಲ ನೀಡಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಸಿಂ.ಲಿಂ.ನಾಗರಾಜು ಹಾಗೂ ಪದಾಧಿಕಾರಿಗಳು, ಕೂಟಗಲ್ಲು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಸ್.ಪಿ.ಚಿನ್ನಗಿರಿಗೌಡ ಹಾಗೂ ಪದಾಧಿಕಾರಿಗಳಿಗೆ ವಿಶೇಷವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಹೋಬಳಿ ಘಟಕಗಳ ಅಧ್ಯಕ್ಷರುಗಳಾದ ಶ್ರೀ ಡೈರಿ ವೆಂಕಟೇಶ್, ಶ್ರೀ ಯೋಗಾನಂದ್, ಶ್ರೀ ಮಹದೇವ್ ಲಕ್ಕಸಂದ್ರ, ಶ್ರೀ ಗಿರೀಶ್ ವಡ್ಡರಹಳ್ಳಿ ಮತ್ತು ಇವರೆಲ್ಲರ ಗೆಳೆಯರ ಬಳಗಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.

ಇದುವರೆಗೆ ರಾಮನಗರ ತಾಲ್ಲೂಕಿನ ಐದು ಸಮ್ಮೇಳನಗಳು ಯಶಸ್ವಿಯಾಗಿ ಜರುಗಿವೆ. ಈ ಸಮ್ಮೇಳನಗಳ ಸರ್ವಾಧ್ಯಕ್ಷತೆಯ ಪೀಠವನ್ನು ಕ್ರಮವಾಗಿ ವಿದ್ವಾನ್ ಜಿ.ವಿ.ಶಿವಸ್ವಾಮಿ, ಶ್ರೀ ಎಂ.ಜಿ.ನಾಗರಾಜ್, ಪ್ರೊ.ಎಂ.ಶಿವನಂಜಯ್ಯ, ಶ್ರೀ ಸು.ಚಿ.ಗಂಗಾಧರಯ್ಯ, ಡಾ.ಎಂ.ಬೈರೇಗೌಡ-ಈ ಐವರು ಗೌರವಾನ್ವಿತರು ಅಲಂಕರಿಸಿದ್ದರು. ಇದೀಗ ಈ ಆರನೆಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವವನ್ನು ಪರಿಷತ್ತಿನ ಕಾರ್ಯಕಾರಿ ಸಮಿತಿಯವರು ಪ್ರೀತಿ-ಅಭಿಮಾನದಿಂದ ನನಗೆ ನೀಡಿದ್ದಾರೆ. ಈ ಮೂಲಕ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದ್ದಾರೆ. ಇನ್ನು ಮುಂದೆ ಸಾಹಿತ್ಯ ರಚನೆಯಲ್ಲಿ ಇನ್ನಷ್ಟು ಸಕ್ರಿಯವಾಗಿ ತೊಡಗಿಕೊಳ್ಳಬೇಕಾದ ಹೊಣೆಗಾರಿಕೆಯನ್ನು ನನಗೆ ನೆನಪಿಸಿದ್ದಾರೆ. ಅದಕ್ಕಾಗಿ ಪರಿಷತ್ತಿನ ಎಲ್ಲ ಗೆಳೆಯರಿಗೆ ನನ್ನ ಧನ್ಯವಾದಗಳನ್ನು ಸಮರ್ಪಿಸುತ್ತೇನೆ.

ಇದು ರಾಮನಗರ ತಾಲ್ಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನ. ಹಾಗಾಗಿ, ರಾಮನಗರ ತಾಲ್ಲೂಕಿನ ಸಂಕ್ಷಿಪ್ತ ಪರಿಚಯವನ್ನಾದರೂ ಮಾಡಿಕೊಡಬೇಕಾಗಿದೆ.

 

ರಾಮನಗರ ತಾಲ್ಲೂಕಿನ ಸಂಕ್ಷಿಪ್ತ ಪರಿಚಯ:

ರಾಮನಗರವು ಈ ಹಿಂದೆ ‘ಕ್ಲೋಸ್‍ಪೇಟೆ’ ಎಂಬ ಹೆಸರಿನಿಂದ ಕರೆಸಿಕೊಳ್ಳುತ್ತಿದ್ದ ಪಟ್ಟಣವಾಗಿತ್ತು. ಅದಕ್ಕೂ ಮುನ್ನ ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ಈ ಪ್ರದೇಶವನ್ನು ಕೆಳಗಲಿ ನಾಡರ್ಗಲ್ಲು, ಕೆಳ್ಗಲಿ ನಾಡು, ಕಿಳಲೈನಾಡು, ಕಲುವಳಿನಾಡು, ಕಲುವೊಳೆನಾಡು, ಕೆಲಳಿನಾಡು, ಶಿವರಾಮಗಿರಿ, ರಾಮಗಿರಿ, ರಾಮಗಿರಿದುರ್ಗ, ಹೊಸಪೇಟೆ, ನವೀನಪೇಟೆ-ಮೊದಲಾದ ಹೆಸರುಗಳಿಂದ ಗುರ್ತಿಸಲಾಗುತ್ತಿತ್ತೆಂದು ಉಲ್ಲೇಖಗಳಿವೆ.

ರಾಮನಗರ ತಾಲ್ಲೂಕು ಹಲವು ಮಹತ್ವಗಳನ್ನು ಒಳಗೊಂಡಿರುವ ಪ್ರದೇಶ. ಪ್ರಾಕೃತಿಕ, ಐತಿಹಾಸಿಕ, ಪೌರಾಣಿಕ, ಸಾಂಸ್ಕøತಿಕ ಮತ್ತು ಸಾಹಿತ್ಯಕ ನೆಲೆಗಳಲ್ಲಿ ರಾಮನಗರಕ್ಕೆ ವಿಶೇಷ ಮಹತ್ವವಿದೆ. ಪರ್ವತಶ್ರೇಣಿಗಳಿಂದ ಆವೃತವಾಗಿರುವ ಸುಂದರವಾದ ಪ್ರಾಕೃತಿಕ ನೆಲೆ ರಾಮನಗರದ್ದು. ಹೀಗಾಗಿಯೇ, ರಾಮನಗರವು ‘ಸಪ್ತಗಿರಿಗಳ ನಾಡು’ ಎಂದು ಕರೆಸಿಕೊಂಡಿದೆ. ‘ಸಿಡಿಲು ಕಲ್ಲಿನ ಬಳಗದೇಳು ಕೋಟೆಯ ನಗರಿ’ ಎಂದು ಸರ್ವಜ್ಞ ವಚನದಲ್ಲಿ ಉಲ್ಲೇಖಿತವಾಗಿರುವ ವಿಚಾರ ರಾಮನಗರವನ್ನು ಕುರಿತದ್ದೆಂದೇ ಹೇಳಲಾಗಿದೆ. ಸಪ್ತಗಿರಿಗಳಷ್ಟೇ ಅಲ್ಲದೆ ರಾಮನಗರದ ಸುತ್ತಮುತ್ತ ಇನ್ನೂ ಹಲವಾರು ಬೆಟ್ಟಗಳಿದ್ದು, ಅವುಗಳ ವಿಶಿಷ್ಟ ವಿನ್ಯಾಸಗಳು ವಿಶೇಷ ಚೆಲುವನ್ನು ತಂದುಕೊಟ್ಟಿವೆ. ಇದು ರಾಮನಗರ ತಾಲ್ಲೂಕಿನ ಪ್ರಾಕೃತಿಕ ಮಹತ್ವ.

ಚಾಲುಕ್ಯರು, ಗಂಗರು, ಚೋಳರು, ರಾಷ್ಟ್ರಕೂಟರು, ನೊಳಂಬರು, ವಿಜಯನಗರದ ಅರಸರು, ಯಲಹಂಕ-ಬೆಂಗಳೂರು-ಮಾಗಡಿ ಕೆಂಪೇಗೌಡರ ಪರಂಪರೆಯ ಪ್ರಭುಗಳು, ಹೈದರ್-ಟಿಪ್ಪು ಮತ್ತು ಮೈಸೂರು ಅರಸರ ಆಳ್ವಿಕೆಯ ಬಗ್ಗೆ ದಾಖಲೆ ಒದಗಿಸುವ ಅನೇಕ ಶಾಸನಗಳು ತಾಲ್ಲೂಕಿನ ಕೆಲವಾರು ಪ್ರದೇಶಗಳಲ್ಲಿ ಕಂಡುಬಂದಿವೆ. ಇದು ತಾಲ್ಲೂಕಿನ ಐತಿಹಾಸಿಕ ಮಹತ್ವ.

ರಾಮಾಯಣ ಮತ್ತು ಮಹಾಭಾರತ ಕಥೆಗಳ ಕಾಲಘಟ್ಟದ ಕೆಲವು ಘಟನೆಗಳು ರಾಮನಗರ ತಾಲ್ಲೂಕಿನ ಕೆಲವಾರು ಪ್ರದೇಶಗಳ ಜೊತೆಗೆ ತಳಕು ಹಾಕಿಕೊಂಡಿವೆ. ರಾಮ-ಲಕ್ಷ್ಮಣ-ಸೀತೆಯರ ವನವಾಸ ಹಾಗೂ ಪಾಂಡವರ ಅರಣ್ಯವಾಸದ ಕೆಲವು ಘಟನೆಗಳು ಇಲ್ಲೇ ನಡೆದಿವೆಯೆಂಬ ಸ್ಥಳಪುರಾಣಗಳು ಇಲ್ಲಿ ಪ್ರಚಲಿತದಲ್ಲಿವೆ. ಹೀಗಾಗಿಯೇ ಈ ತಾಲ್ಲೂಕಿಗೆ ಪೌರಾಣಿಕ ಮಹತ್ವ ಪ್ರಾಪ್ತವಾಗಿದೆ.

ರಾಮನಗರ ತಾಲ್ಲೂಕಿನಾದ್ಯಂತ ಹಿಂದೂ, ಮುಸ್ಲಿಂ, ಸಿಖ್, ಕ್ರೈಸ್ತ ಮೊದಲಾದ ವಿವಿಧ ಧರ್ಮದವರು ವಾಸವಿದ್ದಾರೆ. ದಲಿತರು, ವೀರಶೈವರು, ವೈಶ್ಯರು, ಬ್ರಾಹ್ಮಣರು, ಕ್ಷತ್ರಿಯರು, ಜೈನರು, ಹಕ್ಕಿಪಿಕ್ಕರು, ಕಲ್ಲುಕುಟಿಕರು, ಬೊಂಬೆ ಜನಾಂಗದವರು, ಒಕ್ಕಲಿಗರು, ಅಗಸರು, ಬಣಜಿಗರು, ಈಡಿಗರು, ಕುಂಬಾರರು, ಕಮ್ಮಾರರು, ನಾಯಿಂದರು, ಗಾಣಿಗರು, ಉಪ್ಪಾರರು, ದೊಂಬರು, ಲಂಬಾಣಿಗರು ಮುಂತಾದ ವಿವಿಧ ಜನವರ್ಗದವರು ಈ ತಾಲ್ಲೂಕಿನಲ್ಲಿ ಬದುಕು ಸಾಗಿಸುತ್ತಿದ್ದಾರೆ. ಇವರು ವಿವಿಧ ಕಸುಬುಗಳನ್ನು ತಮ್ಮ ಜೀವನಾಧಾರಕ್ಕಾಗಿ ಅವಲಂಬಿಸಿದ್ದಾರೆ. ಅಲ್ಲದೆ, ಪರಂಪರಾಗತವಾಗಿ ಸಾಗಿಬಂದಿರುವ ಹಬ್ಬಗಳು, ಉತ್ಸವಗಳು, ಆಚರಣೆಗಳು ಮತ್ತು ಕಲೆಗಳಲ್ಲಿ ತಂತಮ್ಮ ವಿಧಿ-ವಿಧಾನಗಳ ಅನುಸಾರ ತೊಡಗಿಕೊಂಡವರಾಗಿದ್ದಾರೆ. 

ರಾಮನಗರ ತಾಲ್ಲೂಕಿನಲ್ಲಿ ಹಲವಾರು ದೇವಾಲಯಗಳು, ಚರ್ಚುಗಳು ಮತ್ತು ಮಸೀದಿ-ಗೋರಿಗಳಿವೆ. ನಗರದ ರಾಮದೇವರ ಜಾತ್ರೆ ಮತ್ತು ರಥೋತ್ಸವ, ನಗರದ ಶಕ್ತಿದೇವತೆಯರ ಕರಗ ಮಹೋತ್ಸವಗಳು-ಅಗ್ನಿಕೊಂಡಗಳು-ಸಿಡಿ ಆಚರಣೆಗಳು, ರಾಮದೇವರ ಬೆಟ್ಟ ಮತ್ತು ರೇವಣಸಿದ್ಧೇಶ್ವರ ಬೆಟ್ಟಗಳ ಜಾತ್ರೆಗಳು, ಮುಸ್ಲಿಮರು ಆಚರಿಸುವ ಉರುಸ್ (ಗಂಧ), ಕ್ರೈಸ್ತರು ನೆರವೇರಿಸುವ ಯೇಸು-ಮೇರಿಯಮ್ಮರ ಮೆರವಣಿಗೆಯ ಉತ್ಸವಗಳು-ಹೀಗೆ ಇನ್ನೂ ಹಲವು ರಾಮನಗರದ ವಿಶಿಷ್ಟ ಹಬ್ಬ-ಜಾತ್ರೆ-ರಥೋತ್ಸವಗಳಾಗಿವೆ. ಅಲ್ಲದೆ, ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ಗ್ರಾಮದೇವತೆಗಳ ಹಬ್ಬಗಳು ವಿಶಿಷ್ಟ ಆಚರಣೆಗಳೊಂದಿಗೆ ನಡೆಯುತ್ತವೆ. 

ರಾಮನಗರದ ಮುಖ್ಯರಸ್ತೆ, ಛತ್ರದ ಬೀದಿ, ಎಂ.ಜಿ.ರಸ್ತೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಭಾದ್ರಪದ ಸಂವತ್ಸರದಲ್ಲಿ ಗಣೇಶೋತ್ಸವದ ಪ್ರಯುಕ್ತ ಸಂಗೀತ, ನೃತ್ಯ, ನಾಟಕ ಮತ್ತಿತರ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗುತ್ತವೆ. ಇಲ್ಲಿ ಜನಪದ ಕಲೆಗಳ ವಿವಿಧ ಪ್ರಕಾರಗಳೂ ಕಂಡುಬರುತ್ತವೆ. ತಮಟೆ-ನಗಾರಿ ವಾದನ, ಮಾರಿ ಕುಣಿತ, ವೀರಗಾಸೆ ಕುಣಿತ, ಸೋಮನ ಕುಣಿತ, ಡೊಳ್ಳು ಕುಣಿತ, ಕೋಲಾಟ, ಹುಲಿವೇಷದ ಕುಣಿತ ಮುಂತಾದ ಜನಪದ ಕಲೆಗಳ ಮೂಲಕ ಇಲ್ಲಿನ ಹಲವಾರು ಕಲಾವಿದರು ರಾಜ್ಯ ಮತ್ತು ರಾಷ್ಟ್ರದ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ಪೌರಾಣಿಕ ನಾಟಕ ಪ್ರದರ್ಶನದ ಆಸಕ್ತಿ ಹವ್ಯಾಸಿ ಕಲಾವಿದರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಹಲವು ಸಂಘ-ಸಂಸ್ಥೆಯವರು ಮತ್ತು ಹವ್ಯಾಸಿ ನಾಟಕ ತಂಡದವರು ನಗರದಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪೌರಾಣಿಕ ನಾಟಕಗಳ ಪ್ರದರ್ಶನವನ್ನು ಆಗಾಗ್ಗೆ ಏರ್ಪಾಡು ಮಾಡುತ್ತಲಿರುತ್ತಾರೆ. ಇವೆಲ್ಲವೂ ರಾಮನಗರದ ಸಾಂಸ್ಕøತಿಕ ನೆಲೆಯ ಜೀವಂತಿಕೆಗೆ ಕುರುಹುಗಳಾಗಿವೆ.

ರಾಮನಗರ ತಾಲ್ಲೂಕಿನ ಸಾಹಿತ್ಯಕ ನೆಲೆ:

ರಾಮನಗರ ತಾಲ್ಲೂಕಿನ ಸಾಹಿತ್ಯಕ ನೆಲೆಗೆ ವಿಶೇಷ ಮಹತ್ವವಿದೆ. ಇಲ್ಲಿನ ಸಾಹಿತ್ಯ ರಚನೆ ಮತ್ತು ಸಾಹಿತ್ಯ ಪೋಷಣೆಯ ನೆಲೆಗಳಿಗೆ ವಿಶಿಷ್ಟ ಆಯಾಮಗಳಿವೆ. ಕನ್ನಡ ಸಾಹಿತ್ಯ ಪರಿಷತ್ತು, ಸಂಸ್ಕøತಿ ಸೌರಭ ಟ್ರಸ್ಟ್, ಕನ್ನಡ ಸಾಹಿತ್ಯ ಮತ್ತು ಸಂಸ್ಕøತಿ ಸಮಿತಿ, ಜನಮುಖಿ ಟ್ರಸ್ಟ್, ನಿಸರ್ಗ ಟ್ರಸ್ಟ್, ಕೆ.ಎಸ್.ಮುದ್ದಪ್ಪ ಸಾಂಸ್ಕøತಿಕ ಟ್ರಸ್ಟ್, ಅರ್ಪಿತಾ ಚಾರಿಟಬಲ್ ಟ್ರಸ್ಟ್, ಶಾಂತಲಾ ಕಲಾ ಕೇಂದ್ರ, ಅಮರಜ್ಯೋತಿ ಕಲಾ ಬಳಗ ಮತ್ತಿತರ ಸಂಘ-ಸಂಸ್ಥೆಗಳು ಆಗಿಂದಾಗ್ಗೆ ಸಾಹಿತ್ಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ರಾಮನಗರದ ಸಾಹಿತ್ಯವಾಹಿನಿಯು ಜೀವಂತಿಕೆಯಿಂದ ಪ್ರವಹಿಸಲು ನೆರವಾಗುತ್ತಿವೆ.

ರಾಮನಗರವೇ ಜನ್ಮಭೂಮಿಯಾಗಿರುವ ಆಧುನಿಕ ಸಾಹಿತ್ಯ ಸಂದರ್ಭದ ಸಾಹಿತಿಗಳಲ್ಲಿ ಡಾ.ಜಿ.ಪಿ.ರಾಜರತ್ನಂ ಮೊದಲಿಗರಾಗಿ ಗುರ್ತಿಸಲ್ಪಟ್ಟಿದ್ದಾರೆ. ಪ್ರೊ.ಸಿ.ಡಿ.ನರಸಿಂಹಯ್ಯ, ಪ್ರೊ.ಎಂ.ಶಿವನಂಜಯ್ಯ, ವಿದ್ವಾನ್ ಜಿ.ವಿ.ಶಿವಸ್ವಾಮಿ, ಡಾ.ಬೈರಮಂಗಲ ರಾಮೇಗೌಡ, ಸು.ರುದ್ರಮೂರ್ತಿಶಾಸ್ತ್ರಿ, ಡಾ.ಕೆ.ವಿ.ಚಂದ್ರಣ್ಣಗೌಡ, ಪ್ರೊ.ಶಿವರಾಮು ಕಾಡನಕುಪ್ಪೆ, ಡಾ.ಬಾನಂದೂರು ಕೆಂಪಯ್ಯ, ಡಾ.ಎಂ.ಬೈರೇಗೌಡ, ಶಿವಾಜಿರಾವ್, ಎಚ್.ವಿ.ಹನುಮಂತು, ಡಾ.ಎ.ಆರ್.ಗೋವಿಂದಸ್ವಾಮಿ, ಡಾ.ಎಲ್.ಸಿ.ರಾಜು, ಕೂ.ಗಿ.ಗಿರಿಯಪ್ಪ, ಡಾ.ಅಂಕನಹಳ್ಳಿ ಪಾರ್ಥ, ಜಿ.ಶಿವಣ್ಣ ಕೊತ್ತೀಪುರ, ಎಸ್.ಸುಮಂಗಳ ಹಾರೋಕೊಪ್ಪ, ವಿ.ಎಚ್.ರಾಜಶೇಖರ್, ಡಾ.ಎಚ್.ವಿ.ಮೂರ್ತಿ, ಎಸ್.ನರಸಿಂಹಸ್ವಾಮಿ, ವಿ.ಆನಂದ್, ಸುರೇಶ್.ಎಲ್., ಎಂ.ಎಚ್.ಪ್ರಕಾಶ್, ರಾಣಿ ಕಿರಣ್, ಅರುಣ್ ಕವಣಾಪುರ, ಸಿ.ರಮೇಶ್ ಹೊಸದೊಡ್ಡಿ, ಎಸ್.ರುದ್ರೇಶ್ವರ, ಜಿ.ಕೃಷ್ಣನಾಯಕ್, ಟಿ.ಆರ್.ಸೌಮ್ಯ, ಪಿ.ಶ್ರೀನಿವಾಸ್, ವಿ.ಲಿಂಗರಾಜು, ಬಿ.ವಿನಯ್‍ಕುಮಾರ್, ಡಾ.ಬಿ.ಜಯದೇವ್, ಜಿ.ಎಚ್.ರಾಮಯ್ಯ, ಚನ್ನವೀರದೇವರು, ಚಂದ್ರಶೇಖರಯ್ಯ, ಶಿವರಾಜ್ ಭರಣಿ, ಆಸಿಫ್ ಷರೀಫ್, ಚನ್ನಮಾನಹಳ್ಳಿ ಮಲ್ಲೇಶ್, ಗೋಪಿನಂದನ, ನಂ.ಶಿವಲಿಂಗಯ್ಯ, ಕೆ.ಎಂ.ಶೈಲೇಶ್, ಸತೀಶ. ಸಿ.ಜಿ., ಪಿ.ಪ್ರದೀಪ್ ಕಿರಣ್, ಅಕ್ಷಯ್ ಗೌತಮ್, ಲಲಿತಮ್ಮ ಚಂದ್ರಶೇಖರ್, ಎನ್.ಸಿದ್ಧಲಿಂಗಯ್ಯ, ಭಾರತಿ ಕಾಸರಗೋಡು, ಶ್ರೀ ಸರ್ಪಭೂಷಣ ರಾಜೇಂದ್ರ ಶಿವಾಚಾರ್ಯ, ಡಾ.ಸಿ.ಶಿವಕುಮಾರಸ್ವಾಮಿ, ಸಿ.ವಿ.ಜಯಣ್ಣ, ಅಂಕ್ನಳ್ಳಿ ಜಯರಾಂ-ಇವರು ರಾಮನಗರ ತಾಲ್ಲೂಕಿನ ಕ್ರಿಯಾಶೀಲ ಬರಹಗಾರರಾಗಿ ಕಂಡುಬರುತ್ತಾರೆ.

ರಾಮನಗರ ತಮ್ಮ ಜನ್ಮಭೂಮಿ ಅಲ್ಲವಾದರೂ, ರಾಮನಗರದಲ್ಲಿ ನೆಲೆಸಿ ರಾಮನಗರದವರೇ ಆಗಿ, ಸಾಹಿತ್ಯ ಮತ್ತು ಸಂಶೋಧನೆಯ ಕ್ಷೇತ್ರಗಳಲ್ಲಿ ಗಮನಾರ್ಹ ಕೆಲಸ ಮಾಡಿದವರಿದ್ದಾರೆ. ಅವರಲ್ಲಿ ಪ್ರಮುಖವಾಗಿ ಡಾ.ಎಂ.ಜಿ.ನಾಗರಾಜ್, ಡಾ.ಕುರುವ ಬಸವರಾಜ್, ಕಾಮಗೆರೆ ಲ.ಕೃಷ್ಣೇಗೌಡ, ಕೆ.ಶಿವಹೊಂಬಯ್ಯ, ಡಿ.ಮಂಜುಳಾ ಪ್ರಕಾಶ್, ಶೈಲಾ ಶ್ರೀನಿವಾಸ್-ಈ ಸಾಲಿನಲ್ಲಿ ಕಂಡುಬರುವ ಬರಹಗಾರರಾಗಿದ್ದಾರೆ.

ರಾಮನಗರದಲ್ಲಿ ಸಾಹಿತ್ಯ ಚಟುವಟಿಕೆಗಳು ಕ್ರಿಯಾಶೀಲವಾಗಿ ನಡೆಯಲು ಕಾರಣರಾದ ಮಹನೀಯರ  ಪಟ್ಟಿಯನ್ನೂ ಕೊಡಬಹುದು. ಅವರಲ್ಲಿ ಸಿ.ಎಂ.ಲಿಂಗಪ್ಪ, ಕೆ.ಶೇಷಾದ್ರಿ(ಶಶಿ), ಡಾ.ಎಸ್.ಎಲ್.ತಿಮ್ಮಯ್ಯ, ಶಿವಾಜಿರಾವ್, ಹೆಬ್ಬಾಲೆ ಲಿಂಗರಾಜು, ಎಸ್.ಟಿ.ಕಾಂತರಾಜ್ ಪಟೇಲ್ ಪ್ರಮುಖರು. ಈ ಪಟ್ಟಿಗೆ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಇತರ ಸಂಘ-ಸಂಸ್ಥೆಗಳ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿರುವ ಎಲ್.ಚಿಕ್ಕಪ್ಪಾಜಿ, ಚೋ.ಶಿವಣ್ಣ, ಎಲ್,ಕೃಷ್ಣೇಗೌಡ, ಬೈರೇಗೌಡ, ಸಿದ್ಧಲಿಂಗೇಗೌಡ(ಮಧು), ರಾ.ಬಿ.ನಾಗರಾಜ್, ಜೆ.ಶಾಂತಾಬಾಯಿ, ಜೆ.ಶೇಷಗಿರಿರಾವ್ ಮತ್ತಿತರರೂ ಸೇರುತ್ತಾರೆ. 

 

ಕನ್ನಡ ಭಾಷೆ ಮತ್ತು ಸಾಹಿತ್ಯದ ಮಹತ್ವ:

ಕನ್ನಡ ಭಾಷೆಗೆ ಐದು ಸಾವಿರ ವರ್ಷಗಳ ಇತಿಹಾಸವಿದೆಯೆಂದು ವಿದ್ವಾಂಸರು ಅಂದಾಜಿಸಿದ್ದಾರೆ. ದಾಖಲೆಗಳು ಮತ್ತು ಉಲ್ಲೇಖಗಳ ಅನುಸಾರ ಕನ್ನಡ ಭಾಷೆಯು ಎರಡು ಸಾವಿರ ವರ್ಷಗಳಿಗಿಂತ ಈಚಿನದ್ದಂತೂ ಅಲ್ಲವೆಂದು ಅಭಿಪ್ರಾಯಪಡಲಾಗಿದೆ. ‘ಎಂದು ಕನ್ನಡ ಭಾಷೆ ಹುಟ್ಟಿತೋ ಅಂದೇ ಕನ್ನಡ ಸಾಹಿತ್ಯವೂ ಹುಟ್ಟಿತು’ ಎನ್ನುವಷ್ಟರಮಟ್ಟಿಗೆ ಕನ್ನಡದ ಭಾಷೆಯಲ್ಲೇ ಸಾಹಿತ್ಯಕ ಗುಣವಿದೆ. ಒಂದರ್ಥದಲ್ಲಿ ಭಾಷೆಯೇ ಸಾಹಿತ್ಯವಾಗಿರುವ ವಿಶೇಷತೆ ಕನ್ನಡಕ್ಕಿದೆ. ಈ ವಿಶೇಷತೆಗೆ ಸಾಕ್ಷಿಯಾಗಿ ‘ಜನಪದ ಸಾಹಿತ್ಯ’ ನಮ್ಮೆದುರಿಗಿದೆ. ಅಕ್ಷರ ಅರಿಯದ ಅನಕ್ಷರಸ್ಥ ಜನ, ತಮ್ಮಿಂದ ಓದಲಾಗದ ಬರೆಯಲಾಗದ, ಆದರೆ ತಾವು ಆಡಬಲ್ಲ ಭಾಷೆಯನ್ನು ಕಾವ್ಯವಾಗಿಸಿರುವ ಅಚ್ಚರಿ ನಮ್ಮ ಕಣ್ಣ ಮುಂದಿದೆ. ಬಹುಶಃ ಇಂತಹ ‘ಅನಕ್ಷರಸ್ಥ ವಿದ್ಯಾವಂತ ಸಮುದಾಯ’ವನ್ನು ಗಮನಿಸಿಯೇ ಕವಿರಾಜಮಾರ್ಗಕಾರ ಕನ್ನಡಿಗರನ್ನು 

ಪದನರಿದು ನುಡಿಯಲುಂ ನುಡಿ

ದುದನರಿಯಲುಮಾರ್ಪರಾ ನಾಡವರ್ಗಳ್

ಚದುರರ್ ನಿಜದಿಂ ಕುರಿತೋ

ದದೆಯುಂ ಕಾವ್ಯಪ್ರಯೋಗ ಪರಿಣತ ಮತಿಗಳ್ 

ಎಂದಿರಬಹುದು ಎನಿಸುತ್ತದೆ. 

ಜನಪದರ ಲೋಕಾನುಭವದ ಸ್ವರೂಪ, ಅವರ ಸೂಕ್ಷ್ಮದೃಷ್ಟಿ, ಸೃಜನ ಶಕ್ತಿ ಅಸದೃಶವಾದದ್ದು. ಅವರ ಸೃಷ್ಟಿಶೀಲತೆಯ ಸಾಮಥ್ರ್ಯವನ್ನು ಅರಿಯಲು ಜನಪದ ಮಹಾಕಾವ್ಯಗಳಿರಲಿ, ಜನಪದ ಕಾವ್ಯ ಪ್ರಕಾರಗಳಲ್ಲಿ ಒಂದಾದ ತ್ರಿಪದಿ ರೂಪವೊಂದನ್ನು ಗಮನಿಸಿದರೆ ಸಾಕು. ಜನಪದ ತ್ರಿಪದಿಗಳಲ್ಲಿ ಅಂತರ್ಗತವಾಗಿರುವ ಜನಪದರ ಲೋಕಾನುಭವ, ಸೊಗಸಾಗಿ ಸಾಗುವ ಛಂದೋಲಯ, ಸರಳವೂ ಸುಲಲಿತವೂ ಆದ ಭಾಷಾ ವಿಲಾಸ, ಸಹಜವಾದ ಪ್ರಾಸ ವಿನ್ಯಾಸ-ಇವೆಲ್ಲವೂ ನಿಜಕ್ಕೂ ಬೆರಗುಗೊಳಿಸುವಷ್ಟು ವಿಶಿಷ್ಟವಾಗಿವೆ.

ನೀರಿಗ್ಹೋಗೋ ಜಾಣೆ ನಿಲ್ಲೇ ನಾ ಬರತೀನಿ

ನಿನ್ನಾಣೆ ನಿನ್ನ ಕೊಡದಾಣೆ| ಕೈಯ್ಯಾನ

ಬಳೆಯಾಣೆ ನೀರ ಹೊಳೆಯಾಣೆ

ಈ ತ್ರಿಪದಿಯಲ್ಲಿರುವ ಸಹಜ ಪ್ರಾಸದ ಹೊಂದಾಣಿಕೆ,

ಗಂಡ ಹೆಂಡಿರ ಜಗಳ ಗಂಧ ತೀಡಿಧಾಂಗ

ನಿಂಗಕ ನೀರು ಎರೆಧಾಂಗ| ಹಿರಿ ಹೊಳೆಯ

ಗಂಗವ್ವ ಸಾಗಿ ಹರಿದಂಗ

 

ಅಂಗೀಯ ಮೇಲಂಗಿ ಛಂದೇನೊ ನನರಾಯ

ರಂಬಿ ಮ್ಯಾಲ ರಂಬಿ ಪ್ರತಿ ರಂಬಿ| ಬಂದಾರ

ಛಂದೇನೊ ರಾಯ ಮನಿಯಾಗ

ಈ ತ್ರಿಪದಿಗಳಲ್ಲಿರುವ ದಾಂಪತ್ಯದ ಯಶಸ್ಸಿನ ಸೂತ್ರ ಮತ್ತು ಸೂಕ್ತವೆನಿಸುವ ಹಿತೋಪದೇಶ,

ಮುದುಕೀಗೆ ಮುದುಕನಿಗೆ ಎಲ್ಲೆಲ್ಲಿ ಮಾತಾಯ್ತು

ಮುತ್ತುಗದ ಮರದ ಗೆಡ್ಡೇಲಿ| ಮುದುಕಯ್ಯ

ಮುದುಕೀಗೆ ಮುತ್ತ ಕೊಡುತಿದ್ದ

ಈ ತ್ರಿಪದಿಯಲ್ಲಿ ಕಂಡುಬರುವ ನವಿರು ಹಾಸ್ಯ ಮತ್ತು ವೃದ್ಧಾಪ್ಯದ ಬಾಳ ಸಂಜೆಯಲ್ಲೂ ಬಣ್ಣ ಕಳೆದುಕೊಳ್ಳದ ದಾಂಪತ್ಯದ ಪ್ರೀತಿ ನಮ್ಮ ಮನಸ್ಸನ್ನೂ ಬೆಚ್ಚಗಾಗಿಸುತ್ತದೆ; ಜನಪದರ ಪ್ರತಿಭಾಶಕ್ತಿಯ ಬಗೆಗೆ ಬೆರಗು ಮೂಡುತ್ತದೆ.

ಜನಪದ ಕಾವ್ಯದ ವಿಶಿಷ್ಟತೆಯೇ ಈ ನೆಲೆಯದ್ದಾಗಿರುವಾಗ, ಇನ್ನು ಇಡೀ ಕನ್ನಡ ಸಾಹಿತ್ಯ ಪರಂಪರೆಯ ಶಕ್ತಿ ಮತ್ತೆಷ್ಟು ವಿಶಿಷ್ಟವಾದುದಾಗಿರಬಹುದು! ಆದಿಕವಿ ಪಂಪ, ಕವಿಚಕ್ರವರ್ತಿ ರನ್ನ, ಉಪಮಾಲೋಲ ಲಕ್ಷ್ಮೀಶ, ಪೊನ್ನ, ಜನ್ನ, ನಾಗವರ್ಮ, ಗದುಗಿನ ನಾರಣಪ್ಪ, ಹರಿಹರ, ರಾಘವಾಂಕ, ವಚನಕಾರರು, ಕೀರ್ತನಕಾರರು ಮತ್ತಿತರ ಕವಿಶ್ರೇಷ್ಠರು ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸುವ ಕೃತಿರತ್ನಗಳನ್ನು ನೀಡಿದ್ದಾರೆ.

ಆಧುನಿಕ ಸಾಹಿತ್ಯ ಸಂದರ್ಭದಲ್ಲಿ ಗಮನಿಸುವುದಾದರೆ, ಕನ್ನಡದ ಕಣ್ವ ಬಿ.ಎಂ.ಶ್ರೀಕಂಠಯ್ಯ, ರಾಷ್ಟ್ರಕವಿ ಕುವೆಂಪು, ವರಕವಿ ಬೇಂದ್ರೆ, ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ, ಸಾಹಿತ್ಯ ಪರಿಚಾರಕ ಡಾ.ಜಿ.ಪಿ.ರಾಜರತ್ನಂ, ಗೋಪಾಲಕೃಷ್ಣ ಅಡಿಗ, ಜಿ.ಎಸ್.ಶಿವರುದ್ರಪ್ಪ, ಡಾ.ಬರಗೂರು ರಾಮಚಂದ್ರಪ್ಪ, ದೇವನೂರು ಮಹಾದೇವ, ಡಾ.ಸಿದ್ಧಲಿಂಗಯ್ಯ ಮೊದಲಾದ ಕವಿಗಳು-ಸಾಹಿತಿಗಳು ಕನ್ನಡ ಸಾಹಿತ್ಯ ಸಂಪತ್ತನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ನವೋದಯ, ನವ್ಯ, ಪ್ರಗತಿಶೀಲ, ದಲಿತ-ಬಂಡಾಯ, ಸ್ತ್ರೀ ಸಂವೇದನೆ, ಆಧುನಿಕೋತ್ತರ ಮೊದಲಾದ ಸಾಹಿತ್ಯ ಪರಂಪರೆಯ ಚಿಂತನಧಾರೆಗಳು ಕನ್ನಡ ಸಾಹಿತ್ಯ ಪರಂಪರೆಯ ಸ್ವರೂಪವನ್ನು ವಿಶಿಷ್ಟವಾಗಿಸಿವೆ.

 

ಕನ್ನಡ ಭಾಷೆಗೆ ಎದುರಾಗಿರುವ ಸವಾಲು:

ಇಷ್ಟೊಂದು ಶಕ್ತಿ, ಶ್ರೀಮಂತಿಕೆ ಮತ್ತು ವಿಶಿಷ್ಟತೆಗಳನ್ನು ಸಾಧಿಸಿಕೊಂಡಿರುವ ಕನ್ನಡ ಭಾಷೆಯಾಗಲೀ ಸಾಹಿತ್ಯವಾಗಲೀ ನಾಶವಾಗಲು ಎಂದಿಗೂ ಸಾಧ್ಯವೇ ಇಲ್ಲ. ಕನ್ನಡ ಭಾಷೆ ಮತ್ತು ಸಾಹಿತ್ಯ ತಮ್ಮ ಹುಟ್ಟಿನ ಜೊತೆಯಲ್ಲೇ ಅಮೃತತ್ವವನ್ನೂ ಪಡೆದುಕೊಂಡೇ ಬಂದಿವೆ. ಸಾವಿರ ಭಾಷೆಗಳು ಸವಾರಿ ಮಾಡಿದರೂ ಕನ್ನಡ ಭಾಷೆ ಮತ್ತು ಸಾಹಿತ್ಯ ಯಾವತ್ತಿಗೂ ನಲುಗಿಹೋಗುವುದಿಲ್ಲ.

ಕನ್ನಡಕ್ಕೆ ಇಂದು ಎದುರಾಗಿರುವುದು ಸತ್ಯವಾಗಿಯೂ ಸಾವಿನ ಸಮಸ್ಯೆಯಲ್ಲ; ಅದು ನೋವಿನ ಆತಂಕ! ‘ಸಾವು’ ಎದುರಾಗುತ್ತದೆಂಬ ಭಯವಿಲ್ಲದ ಕನ್ನಡ ಭಾಷೆಗೆ ಬದುಕಿನುದ್ದಕ್ಕೂ ‘ನೋವು’ ಬಾಧಿಸುತ್ತಲೇ ಇರುವ ಆತಂಕವಂತೂ ಇದ್ದೇ ಇದೆ. ಈ ‘ನೋವು’ ನೀಡುವವರಲ್ಲಿ ಪರಭಾಷಿಕರಿಗಿಂತ ಹೆಚ್ಚಾಗಿ ಸ್ವಭಾಷಿಕರ ಪ್ರಮಾಣವೇ ಹೆಚ್ಚಾಗಿರುವುದು ನಿಜಕ್ಕೂ ನೋವಿನ ಸಂಗತಿ! ಹಾಗೆ ನೋಡಿದರೆ, ಕಿಟೆಲ್, ರೈಸ್‍ರಂತಹ ಪಾಶ್ಚಾತ್ಯ ವಿದ್ವಾಂಸರೇ ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗಾಗಿ ಮಹತ್ವದ ಕೆಲಸಗಳನ್ನು ಮಾಡಿದ್ದಾರೆ. 

ಪರಭಾಷಿಕರು ಕನ್ನಡ ಭಾಷೆಗೆ ಧಕ್ಕೆ ತರುತ್ತಿಲ್ಲವೆಂಬುದು ಈ ಅಭಿಪ್ರಾಯದ ಅರ್ಥವಲ್ಲ. ಕರ್ನಾಟಕದ ಗಡಿ ಪ್ರದೇಶಗಳಲ್ಲಿ ಕನ್ನಡ ಭಾಷೆ ಎದುರಿಸುತ್ತಿರುವ ಎದುರಿಸಬೇಕಾಗಿರುವ ಸವಾಲಿನ ಸ್ವರೂಪ ವಿವರಣೆಗೆ ನಿಲುಕದ್ದು. ಆದರೆ, ಅದನ್ನೂ ಮೀರಿಸುವ ಆತಂಕ ಸೃಷ್ಟಿಸಿರುವವರೆಂದರೆ, ಕರ್ನಾಟಕದ ಒಳಪ್ರದೇಶಗಳಲ್ಲೇ ಬಾಳುತ್ತಿರುವ ‘ತುಸು’ ಪ್ರಮಾಣದ ಪರಭಾಷಿಕರು ಮತ್ತು ಸ್ವಭಾಷಾ ಪ್ರೇಮವನ್ನು ಕಳೆದುಕೊಂಡು ಅಭಿಮಾನಶೂನ್ಯರಾಗುತ್ತಿರುವ ‘ಬಹು’ ಪ್ರಮಾಣದ ಕನ್ನಡಿಗರು! ಇಂಥವರನ್ನು ಕುರಿತೇ ಕುವೆಂಪು ಅವರು ‘ಸಾಯುತಿದೆ ನಿಮ್ಮ ನುಡಿ ಓ ಕನ್ನಡದ ಕಂದರಿರ’ ಎಂಬ ಕವಿತೆ ರಚಿಸಿದ್ದಾರೆ. ಈ ಕವಿತೆಯಲ್ಲಿರುವ ‘ಕೊಲೆಗೈದರಮ್ಮನನೆ ಕೊಲಿಸಿದಂತೆ’ ಎಂಬ ಸಾಲು ಅರ್ಥಪೂರ್ಣವಾಗಿದೆ. ಕನ್ನಡಗರೇ ಕನ್ನಡವನ್ನು ಕಡೆಗಣಿಸುವುದನ್ನು ಕುವೆಂಪುರವರು ‘ಕ್ರೌರ್ಯ’ ಎಂದೇ ಪರಿಗಣಿಸಿದ್ದಾರೆ. ಕನ್ನಡದ ನೆಲದಲ್ಲಿ ಬದುಕುತ್ತಿರುವ ಯಾರೊಬ್ಬರೂ ಇಂಥ ಕ್ರೌರ್ಯದಲ್ಲಿ ತೊಡಗಬಾರದೆಂಬುದು ಪ್ರತಿಯೊಬ್ಬರ ಕಳಕಳಿಯಾಗಬೇಕು.

ಇವರಲ್ಲಿ ಪರಭಾಷಾ ವ್ಯಾಮೋಹ ಪ್ರಮುಖವಾಗಿ ಕಂಡುಬರುತ್ತಿರುವುದು ಶಿಕ್ಷಣದ ಭಾಷಾ ಮಾಧ್ಯಮವನ್ನು ಕುರಿತ ವಿಚಾರದಲ್ಲಿ! ಮಕ್ಕಳಿಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಿದರೆ ಮಾತ್ರ ಅವರ ಉದ್ಧಾರ ಸಾಧ್ಯವೆಂಬ ಭ್ರಮೆ ಬೆಳೆದು ಬಹಳ ವರ್ಷಗಳೇ ಆಗಿವೆ. ಕನ್ನಡ ಮಾಧ್ಯಮವೆಂಬುದು ಬಡವರು ಮತ್ತು ದಡ್ಡರು ಶಿಕ್ಷಣ ಪಡೆಯಲು ಇರುವ ಏಕೈಕ ಮಾರ್ಗ ಎಂಬ ಭಾವನೆ ಬಲಿತಾಗಿದೆ. ಈ ಬಗೆಯ ಅನಿಸಿಕೆಯಿಂದಾಗಿ, ಆಂಗ್ಲವು ‘ಅನ್ನದ ಭಾಷೆ’ಯೆಂಬ, ಕನ್ನಡವು ‘ಬೇಡದ ಭಾಷೆ’ಯೆಂಬ ಭ್ರಾಂತಿ ಬೇರೂರಿದೆ. ಹಾಗಾಗಿಯೇ, ಕನ್ನಡವು ‘ಕೊರಳಿನ ಭಾಷೆ’ಯೂ ಆಗದ, ‘ಕರುಳಿನ ಭಾಷೆ’ಯೂ ಆಗದ ಸ್ಥಿತಿಯೊಂದು ನಿರ್ಮಾಣವಾದಂತಾಗಿದೆ.

ಪರಭಾಷೆ ಕಲಿಯಬಾರದು ಎಂಬುದು ಈ ಮಾತಿನ ಅರ್ಥವಲ್ಲ. ಎಷ್ಟೇ ಭಾಷೆಗಳನ್ನು ಕಲಿತರೂ ಅದು ಲಾಭವೇ ಹೊರತು ನಷ್ಟವೇನಲ್ಲ. ಆದರೆ, ‘ಕಲಿಕೆಯ ಆಸಕ್ತಿ’ಯು ‘ಪರಭಾಷಾ ವ್ಯಾಮೋಹ’ವಾಗಿ ಮಾರ್ಪಟ್ಟು ಅದು ಕನ್ನಡವನ್ನು ಕಡೆಗಣಿಸುವಷ್ಟು ಪ್ರಬಲವಾಗಬಾರದು. ಪರಭಾಷಾ ಕಲಿಕೆಯು ಸ್ವಭಾಷೆಯ ಪೋಷಣೆಗೆ ಪೂರಕವಾಗಬೇಕು. ಹಾಗಾಗದಿರುವುದೇ ಕರ್ನಾಟಕದಲ್ಲಿ ಕನ್ನಡವು ಕಡೆಗಣನೆಯಾಗುತ್ತಿರುವುದಕ್ಕೆ ಕಾರಣ ಎನಿಸುತ್ತದೆ.

ಶಿಕ್ಷಣ ನೀಡುವ ಸಾಂಪ್ರದಾಯಿಕ ಪದ್ಧತಿಯಲ್ಲೇ ಇಂದು ಆಮೂಲಾಗ್ರ ಬದಲಾವಣೆ ಆಗಬೇಕಾಗಿದೆ. ಕನ್ನಡ ಶಾಲೆಗಳ ‘ದೇಹ’ ಮತ್ತು ‘ಆತ್ಮ’ಗಳೆರಡೂ ಹೊಸ ವಿನ್ಯಾಸವನ್ನು ಪಡೆದುಕೊಳ್ಳಬೇಕಾಗಿದೆ. ಶಾಲಾ ಕಟ್ಟಡಗಳು ಆಕರ್ಷಕ ರೂಪ ಪಡೆದುಕೊಳ್ಳಬೇಕು. ಆಧುನಿಕ ಪಾಠೋಪಕರಣಗಳು ಮತ್ತು ಪೀಠೋಪಕರಣಗಳಿಂದ ಸುಸಜ್ಜಿತಗೊಳ್ಳಬೇಕು. ತರಗತಿ ಕೊಠಡಿಗಳ ಕೊರತೆ ವಿದ್ಯಾರ್ಥಿಗಳನ್ನಾಗಲೀ ಅಧ್ಯಾಪಕರನ್ನಾಗಲೀ ಬಾಧಿಸಬಾರದು. ಇಡೀ ಶಾಲಾ ಆವರಣದಲ್ಲಿ ಅಚ್ಚುಕಟ್ಟುತನ ಕಂಗೊಳಿಸಬೇಕು.

ಶಾಲಾ ಕಟ್ಟಡಗಳ ಹೊರ ಮತ್ತು ಒಳರೂಪಗಳ ‘ದೇಹ ರಚನೆ’ಯನ್ನೂ ಒಳಗೊಂಡು, ಶೈಕ್ಷಣಿಕ ಗುಣಮಟ್ಟದ ‘ಆತ್ಮ ಸಂರಚನೆ’ಯವರೆಗೆ ಎಲ್ಲವೂ ಸುವ್ಯವಸ್ಥಿತ ರೀತಿಯಲ್ಲಿ ರೂಪುಗೊಳ್ಳಬೇಕು. ಆ ಸುವ್ಯವಸ್ಥೆಯೇ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಆಕರ್ಷಿಸುವಂತಿರಬೇಕು. ಅಧ್ಯಾಪಕರು ಅಧ್ಯಯನಶೀಲರಾಗಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಕಾರ್ಯದಲ್ಲಿ ಪ್ರಾಮಾಣಿಕವಾಗಿ ತೊಡಗಿಕೊಳ್ಳಬೇಕು. ಕನ್ನಡ ಶಾಲೆಗಳಲ್ಲಿ ಇಂಗ್ಲಿಷ್‍ನಂತಹ ಅನಿವಾರ್ಯ ಭಾಷೆಗಳ ಸಂವಹನ ಕೌಶಲ್ಯವನ್ನು ಕಲಿಸಲು ಪೂರಕವಾಗುವಂತೆ ಪಠ್ಯವ್ಯವಸ್ಥೆ ಮರುವಿನ್ಯಾಸಗೊಳ್ಳಬೇಕು. ಇಂಥ ‘ಹೊರ’ ಮತ್ತು ‘ಒಳ’ ಆಕರ್ಷಣೆಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಪರಭಾಷಾ ವ್ಯಾಮೋಹದ ಹಾವಳಿಯನ್ನು ಒಂದಿಷ್ಟು ತಗ್ಗಿಸಲು ಸಾಧ್ಯವಿದೆ.

ಭಾಷೆ ಎಂಬುದು ಭಾವಾಭಿವ್ಯಕ್ತಿಗೊಂದು ಸಹಾಯಕ ಸಾಧನ. ಭಾವಗಳ ಅಭಿವ್ಯಕ್ತಿಗೆ ಅವರವರ ಸ್ವಭಾಷೆಗಿಂತ ಸಮರ್ಥವಾದ ಸಂವಹನ ಸಾಧನ ಬೇರೊಂದಿಲ್ಲ. ‘ವಿವೇಕ’ ಬೆಳೆಸಿಕೊಳ್ಳಲು ‘ವಿಚಾರವಂತಿಕೆ’ ಬೇಕು. ‘ವಿಚಾರವಂತಿಕೆ’ಯ ಬೆಳವಣಿಗೆ ಪರಭಾಷಾ ಮಾಧ್ಯಮದಿಂದ ಮಾತ್ರ ಸಾಧ್ಯವೆಂದು ಅಂದುಕೊಂಡಲ್ಲಿ ಅದು ಬರಿಯ ಭ್ರಾಂತಿಯಾದೀತು. ವಿವೇಕದ ವೃದ್ಧಿಗೂ ಭಾಷಾ ಮಾಧ್ಯಮಕ್ಕೂ ಯಾವ ಸಂಬಂಧವೂ ಇಲ್ಲ. ಹಾಗಾಗಿ, ಆಂಗ್ಲ ಮಾಧ್ಯಮವಾಗಲೀ ಕನ್ನಡ ಮಾಧ್ಯಮವಾಗಲೀ ಅದು ವಿದ್ಯಾರ್ಥಿಗಳ ವಿವೇಕ ಅಥವಾ ಅವಿವೇಕವನ್ನು ಅಳೆಯುವ ಮಾನದಂಡ ಖಂಡಿತ ಅಲ್ಲ.

ಕನ್ನಡ ಭಾಷೆಯ ಬಗ್ಗೆ ಇಷ್ಟೆಲ್ಲಾ ಹೇಳಿದ ಮೇಲೂ ಇನ್ನೊಂದು ಸಂಗತಿಯನ್ನು ಹೇಳಲೇಬೇಕು. ಅಸದೃಶವಾದ ತಮ್ಮ ಕನ್ನಡಾಭಿಮಾನವನ್ನು ನಾಡಿನಾದ್ಯಂತ ಬೆಳಗಿಸಿದವರು ಕವಿ ಡಾ.ಜಿ.ಪಿ.ರಾಜರತ್ನಂ. ಅವರ ಪದ್ಯದ ಸಾಲುಗಳು ಹೀಗಿವೆ:

ನರಕಕ್ಕ್ ಇಳ್ಸಿ ನಾಲ್ಗೆ ಸೀಳ್ಸಿ

ಬಾಯ್ ಒಲ್‍ಸಾಕಿದ್ರೂನೆ

ಮೂಗ್ನಲ್ ಕನ್ನಡ ಪದವಾಡ್ತೀನಿ

ನನ್ ಮನಸನ್ ನೀ ಕಾಣೆ

ಇಂಥ ಅಪ್ಪಟ ಕನ್ನಡಾಭಿಮಾನಿ ರಾಜರತ್ನಂರವರ ಜನ್ಮಭೂಮಿ ರಾಮನಗರ. ಇದೇ ನೆಲದ ಮಕ್ಕಳಾಗಿರುವ ನಾವು ರಾಜರತ್ನಂ ಅವರಷ್ಟೇ ಕನ್ನಡಾಭಿಮಾನಿಗಳಾಗಬೇಕು. ಅಷ್ಟಾಗದಿದ್ದರೂ, ನಾವೂ ಕನ್ನಡಿಗರಾಗಿರುವ ಕಾರಣಕ್ಕೆ ಕನ್ನಡದ ಬಗ್ಗೆ ಸಹಜವಾದ ಪ್ರೀತಿಯನ್ನಾದರೂ ಇಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ನಾವು ‘ಕನ್ನಡಿಗರು’ ಎಂದು ಅನ್ನಿಸಿಕೊಳ್ಳುವುದಿರಲಿ, ಮೊದಲಿಗೆ ‘ಮನುಷ್ಯರು’ ಎಂದೇ ಅನ್ನಿಸಿಕೊಳ್ಳಲಾರೆವು.

 

ಸಾಹಿತ್ಯ ಲೋಕಪ್ರಯೋಜನಕಾರಿ:

ಸಮಾಜದಲ್ಲಿ ಸಾಹಿತಿಗಳ ಪಾತ್ರ ಅತ್ಯಂತ ಮಹತ್ವವಾದುದು. ಸಾಹಿತ್ಯವು ತಾನು ಹುಟ್ಟಿದಾಗಿನಿಂದಲೂ ತನ್ನ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸುತ್ತಲೇ ಬಂದಿದೆ. ‘ಕಾವ್ಯದಿಂದ ಏನು ಪ್ರಯೋಜನ?’ ಎಂದು ಪ್ರಶ್ನಿಸುವವರಿಗೆ ಕವಿರಾಜಮಾರ್ಗಕಾರ ಒಂಬತ್ತನೆಯ ಶತಮಾನದಲ್ಲೇ ಉತ್ತರ ಕೊಟ್ಟಿದ್ದಾನೆ.

ಪಾಪಮಿದು ಪುಣ್ಯಮಿದು ಹಿತ

ರೂಪಮಿದಹಿತಪ್ರಕಾರಮಿದು ಸುಖಮಿದು ದುಃ

ಖೋಪಾತ್ತಮಿದೆಂದ¾Âಪುಗು

ಮಾಪರಮಕವಿಪ್ರಧಾನರಾಕಾವ್ಯಂಗಳ್

ಪ್ರತಿಯೊಬ್ಬ ಸಾಹಿತಿಯೂ ಲೋಕಾನುಭವವನ್ನು ತನ್ನ ಪ್ರತಿಭಾಶಕ್ತಿಯಿಂದ ಸಾಹಿತ್ಯವನ್ನಾಗಿಸಿ ಅದನ್ನು ಸಮಾಜಕ್ಕೆ ಒಪ್ಪಿಸುತ್ತಾನೆ. ಅದನ್ನು ಆಸ್ವಾದಿಸುವ ಸಹೃದಯರು ಪಾಪ-ಪುಣ್ಯ, ಹಿತ-ಅಹಿತ, ಸುಖ-ದುಃಖಗಳ ಸ್ವರೂಪ ಮತ್ತು ಅವುಗಳಿಗೆ ಕಾರಣವಾಗುವ ಅಂಶಗಳ ಬಗೆಗೆ ಅರಿವು ಪಡೆದುಕೊಳ್ಳುತ್ತಾರೆ. ಅರಿವು ವಿವೇಚನೆಯನ್ನು ಬೆಳೆಸುತ್ತದೆ. ಹಾಗಾಗಿಯೇ, ಸಾಹಿತ್ಯವು ಲೋಕದ ಅಂಕುಡೊಂಕುಗಳನ್ನು ಅನಾವರಣಗೊಳಿಸುತ್ತಾ ಸಾಮಾಜಿಕ ಪರಿವರ್ತನೆಗಾಗಿ ಆರೋಗ್ಯಕರ ನೆಲೆಯಲ್ಲಿ ಹಂಬಲಿಸುತ್ತದೆ; ಆ ಹಂಬಲಿಕೆಯಲ್ಲಿ ಸಾಮಾಜಿಕ ಸ್ಥಿರತೆಯನ್ನಂತೂ ಕಾಪಾಡಿಕೊಳ್ಳುತ್ತದೆ;. ಈ ದೃಷ್ಟಿಯಿಂದ ಸಾಹಿತ್ಯವು ಲೋಕಪ್ರಯೋಜನಕಾರಿಯಾದುದೇ ಆಗಿದೆಯೆನ್ನಲು ಯಾವುದೇ ಅಡ್ಡಿಯಿಲ್ಲ. 

ಆದರೆ, ‘ಲೋಕಪ್ರಯೋಜನಕಾರಿ’ ಸಾಹಿತ್ಯವನ್ನು ಇವತ್ತಿನ ಸಂದರ್ಭದಲ್ಲಿ ‘ಲೋಕಕಂಟಕ’ ಎಂದು ಭಾವಿಸುವ ಅನಾರೋಗ್ಯಕರ ಚಿಂತನೆ ಕಂಡುಬರುತ್ತಿದೆ. ಇದರ ಪರಿಣಾಮವಾಗಿ ‘ಅಭಿವ್ಯಕ್ತಿ ಸ್ವಾತಂತ್ರ್ಯ’ವು ‘ಹತ್ಯೆ’ಗೆ ಗುರಿಯಾಗುತ್ತಿದೆ. ಸಾಹಿತ್ಯವು ‘ಸಾಮಾಜಿಕ ಸಾಮರಸ್ಯ’ ಮೂಡಿಸುವ ಸಾಧನವಾಗಬೇಕು. ಆದರೆ ಇವತ್ತಿನ ಸಂದರ್ಭದಲ್ಲಿ ಅದು ‘ಸಾಮಾಜಿಕ ಸಂಘರ್ಷ’ಕ್ಕೆ ಕಾರಣವಾಗುತ್ತಿದೆ. ‘ಸಾಹಿತಿಗಳು’ ಮತ್ತು ಅವರ ವಿರುದ್ಧ ‘ಪಾತಕಿಗಳು’ ಸಮರಕ್ಕೆ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ. ‘ಪೆನ್ನು’ ಮತ್ತು ‘ಗನ್ನು’ ಯುದ್ಧಕ್ಕಿಳಿದಿವೆ. ಇದು ನಿಜಕ್ಕೂ ಅನಾರೋಗ್ಯಕರ ಮತ್ತು ಆತಂಕದ ವಿಚಾರ. ಈ ಬೆಳವಣಿಗೆಯು ‘ವೈಚಾರಿಕತೆ’ ಮತ್ತು ‘ಚಿಂತನಶೀಲತೆ’ಗಳು ಎಷ್ಟರಮಟ್ಟಿಗೆ ದಿವಾಳಿಯೆದ್ದಿವೆ ಎಂಬುದರ ಸಂಕೇತ. ‘ವಿವೇಕ’ ಮತ್ತು ‘ಮಾನವತೆ’ ಬೆಳೆಸಬೇಕಾದ ಸಾಹಿತ್ಯ ‘ಅವಿವೇಕ’ ಮತ್ತು ‘ರಾಕ್ಷಸತ್ವ’ಗಳಿಗೆ ಮುಖಾಮುಖಿ ಆಗುಬೇಕಾಗಿದೆ. ಸಾಹಿತ್ಯದಿಂದ ಮನಸ್ಸು ‘ಅರಳುವ’ ಬದಲು ‘ಕೆರಳುವ’ ಕೆಲಸ ಆಗುತ್ತಿದೆ. ಇದು ಸಾಮಾಜಿಕ ವಿನಾಶದ ಸೂಚನೆ. ಹಾಗಾಗಿ, ‘ಗನ್ನು’ ಹಿಡಿದಿರುವ ಅವಿವೇಕಿಗಳನ್ನು ತಿದ್ದುವುದು ಸಾಧ್ಯವಿಲ್ಲ ಅನಿಸಿದಾಗ, ‘ಪೆನ್ನು’ ಹಿಡಿದಿರುವ ವಿವೇಕಿಗಳೇ ಸಂಯಮ ತಂದುಕೊಂಡು, ತಮ್ಮ ಚಿಂತನೆಗಳ ಅಭಿವ್ಯಕ್ತಿಗೆ ಸಾಹಿತ್ಯದ ಪರ್ಯಾಯ ಶೈಲಿಯನ್ನೇ ಹುಡುಕಬೇಕಿದೆ. 

 

ಸಾಹಿತ್ಯ ಸೇವೆಗೆ ಯಾರಿಗೂ ನಿರ್ಬಂಧವಿಲ್ಲ:

ಸಾಹಿತ್ಯಕ್ಕೆ ಹಿಂದೆ ರಾಜಮಹಾರಾಜರು ಆಶ್ರಯದಾತರಾಗಿದ್ದರು. ಇಂದು ರಾಜಕಾರಣಿಗಳು ಸಾಹಿತ್ಯದ ಪೋಷಕರಾಗಿದ್ದಾರೆ. ಇದು ಸ್ವಾಭಾವಿಕ. ರಾಜಕಾರಣಿಗಳನ್ನು ಸಾಹಿತ್ಯ ಕ್ಷೇತ್ರದಿಂದ ದೂರವಿಡಬೇಕು ಎಂಬ ವಾದಕ್ಕೆ ಅರ್ಥವಿಲ್ಲ. ಸಾಹಿತ್ಯ ಕ್ಷೇತ್ರ ಮುಚ್ಚಿದ ಕೋಟೆಯಲ್ಲ; ಅದೊಂದು ತೆರೆದ ಮಹಾಮನೆ. ಅದರ ಬಾಗಿಲುಗಳಿಲ್ಲ.  ಸಾಹಿತ್ಯ ರಚನೆ ಹೇಗೆ ಸಾಹಿತಿಗಳ ಕರ್ಮವೋ, ಹಾಗೇ ಸಾಹಿತ್ಯ ಪೋಷಣೆ ರಾಜಕಾರಣಿಗಳ ಕರ್ತವ್ಯ. ಆ ಕರ್ತವ್ಯ ನಿಭಾಯಿಸಲು ಅವರಿಗೆ ಪ್ರೇರಣೆ ಒದಗಿಸಿದಾಗ ಸಾಹಿತ್ಯದ ಬೆಳವಣಿಗೆ ಇನ್ನಷ್ಟು ಸರಾಗವಾಗಲು ಸಾಧ್ಯವಾಗುತ್ತದೆ. ಸಾಹಿತ್ಯ ಸೇವೆಗೆ ಯಾರಿಗೂ ನಿರ್ಬಂಧವಿಲ್ಲ ಎಂಬ ಅಂಶವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ. 

 

ರೈತಪರ ಚಿಂತನೆಯ ಅಗತ್ಯ:

ಸಾಹಿತ್ಯಕ್ಕೆ ಇಂಥದ್ದೇ ವಸ್ತು ವಿಷಯ ಇರಬೇಕೆಂಬ ಮಿತಿಯಿಲ್ಲ. ಅದು ಸಾಹಿತಿಯ ಲೋಕಾನುಭವದ ವ್ಯಾಪ್ತಿಯನ್ನು ಆಧರಿಸಿ ಕೈಚಾಚಿ ಸಿಕ್ಕಿದ್ದೆಲ್ಲವನ್ನೂ ದಕ್ಕಿಸಿಕೊಳ್ಳುತ್ತದೆ. 

ಇವತ್ತಿನ ಸಮ್ಮೇಳನದಲ್ಲಿ ರೈತರ ಸಮಸ್ಯೆಗಳನ್ನು ಕುರಿತು ಚರ್ಚಿಸುವ ಗೋಷ್ಠಿಯೂ ಸೇರ್ಪಡೆಯಾಗಿರುವುದು ಸಂತೋಷದ ವಿಷಯ. ಬಾಳನ್ನು ಸಂಸ್ಕರಿಸಲು ‘ಸಾಹಿತ್ಯ ಕೃಷಿ’ ಎಷ್ಟು ಮುಖ್ಯವೋ, ಬದುಕಲು ‘ಧಾನ್ಯ ಕೃಷಿ’ಯೂ ಅಷ್ಟೇ ಮುಖ್ಯ. ಏಕೆಂದರೆ, ಅನ್ನವಿಲ್ಲದೆ ಅನ್ಯವೇನೂ ಇಲ್ಲ!

ರೈತ ಇರದಿದ್ದರೆ ಎಲ್ಲರೂ ಹಸಿದುಕೊಂಡೇ ಇರಬೇಕಾಗುತ್ತಿತ್ತು. ಎಲ್ಲರ ಹಸಿವು ನೀಗಿಸಲು ನಿರಂತರ ದುಡಿಯುತ್ತಿರುವ ರೈತ ತಾನೇ ಸಮಸ್ಯೆಗಳಿಗೆ ಸಿಲುಕಿದರೆ ಅದನ್ನು ಸಹಿಸಲಾಗದು. ಇದನ್ನರಿತೇ ಕುವೆಂಪು ಅವರು ರೈತರ ಬವಣೆಯನ್ನು ರೈತರ ದೃಷ್ಟಿಯಿಂದಲೇ ಗಮನಿಸಿ ಚಿತ್ರಿಸಿದ್ದಾರೆ.

ಕರಿಯರದೊ ಬಿಳಿಯರದೊ ಯಾರದಾದರೆ ಏನು?

ಸಾಮ್ರಾಜ್ಯವಾವಗಂ ಸುಲಿಗೆ ರೈತರಿಗೆ!

ವಿಜಯನಗರವೊ? ಮೊಗಲರಾಳ್ವಿಕೆಯೊ? ಇಂಗ್ಲಿಷರೊ?

ಎಲ್ಲರೂ ಜಿಗಣೆಗಳೆ ನನ್ನ ನೆತ್ತರಿಗೆ!

ಕತ್ತಿ ಪರದೇಶಿಯಾದರೆ ಮಾತ್ರ ನೋವೆ?

ನಮ್ಮವರೆ ಹದಹಾಕಿ ತಿವಿದರದು ಹೂವೆ?

ಎಂದಿರುವ ಕುವೆಂಪುರವರು ರೈತರ ನೋವು-ಬವಣೆಗಳನ್ನು ತುಂಬಾ ಮಾರ್ಮಿಕವಾಗಿ ಚಿತ್ರಿಸಿದ್ದಾರೆ. ಅನ್ನ ಕೊಡುವ ರೈತ ಎಂದೂ ನೋಯಬಾರದು. ಸಾಲದ ಶೂಲಕ್ಕೆ ಸಿಲುಕಿ ನರಳಬಾರದು. ಆತ ಬೆಳೆದ ಬೆಳೆಗೆ ನ್ಯಾಯವಾದ ಬೆಲೆ ಸಿಗುವಂತಾಗಬೇಕು. ಬೇಸಾಯಕ್ಕೆ ಬೇಕಾದ ಅಗತ್ಯ ಪರಿಕರಗಳ ನೆರವು ದೊರಕಬೇಕು. ಶ್ರಮದ ಫಲ ಮಧ್ಯವರ್ತಿಗಳ ಪಾಲಾಗದೆ ನೇರ ಆತನ ಕೈಗೇ ಸಿಗುವ ವ್ಯವಸ್ಥೆಯಾಗಬೇಕು. ಆಗ ಮಾತ್ರ ರೈತನ ಮುಖದಲ್ಲಿ ನಗು ಮಿನುಗಲು ಸಾಧ್ಯ. ಆತನ ನಗು ಲೋಕವನ್ನೂ ನಗಿಸಿ ಸಂತೋಷವಾಗಿಡಬಲ್ಲುದು.

 

ಕನ್ನಡ ಸಾಹಿತ್ಯ ಪರಿಷತ್ತಿನ ಕ್ರಿಯಾಶೀಲತೆ:

ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ. ಕನ್ನಡ ನಾಡು, ನುಡಿ ಮತ್ತು ಸಾಹಿತ್ಯದ ಉಳಿವು ಮತ್ತು ಬೆಳವಣಿಗೆಗಾಗಿ ಕಂಕಣಬದ್ಧವಾಗಿ ದುಡಿಯುತ್ತಿರುವ ಸಂಸ್ಥೆ. ರಾಮನಗರದಲ್ಲೂ ಇದು ಅತ್ಯಂತ ಕ್ರಿಯಾಶೀಲವಾಗಿ ಕಾರ್ಯಚಟುವಟಿಕೆಗಳನ್ನು ನಡೆಸುತ್ತಾ ಬರುತ್ತಿದೆ. ಇವತ್ತಿನ ಈ ಸಮ್ಮೇಳನವೂ ಯಶಸ್ವಿಯಾಗುತ್ತದೆಂಬ ಭರವಸೆ ಎಲ್ಲರಿಗೂ ಇದ್ದೇ ಇದೆ. ಕವಿಗೋಷ್ಠಿ, ವಿಚಾರಗೋಷ್ಠಿ, ರೈತಗೋಷ್ಠಿಗಳು ಉಪಯುಕ್ತ ವಿಚಾರಗಳನ್ನು ಅನಾವರಣಗೊಳಿಸುತ್ತವೆಂಬ ನಂಬಿಕೆಯೂ ಇದೆ.

ಆದರೆ, ಇಷ್ಟೆಲ್ಲಾ ಉಪಯುಕ್ತ ಕಾರ್ಯಕ್ರಮಗಳನ್ನು ಆಯೋಜಿಸಿ ಯಶಸ್ವಿಗೊಳಿಸುತ್ತಾ ಬಂದಿರುವ ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿಗೆ ಕಛೇರಿಗಾಗಿ ಒಂದು ಸ್ಥಳಾವಕಾಶ ಇದುವರೆಗೂ ಲಭ್ಯವಾಗಿಲ್ಲದಿರುವುದು ನಿಜಕ್ಕೂ ವಿಷಾದದ ಸಂಗತಿ. ಕರ್ನಾಟಕ ಸರ್ಕಾರಕ್ಕೆ ಖಂಡಿತವಾಗಿಯೂ ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಯ ಬಗ್ಗೆ ಕಾಳಜಿಯಿದೆ. ಅದಕ್ಕಾಗಿಯೇ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಮೊದಲಾದ ಅಂಗಸಂಸ್ಥೆಗಳು ಮತ್ತು ಇಲಾಖೆಗಳನ್ನೇ ಅದು ರಚನೆ ಮಾಡಿಕೊಂಡಿದೆ. ಇವೆಲ್ಲಕ್ಕೂ ಸರ್ಕಾರದ ಭವ್ಯ ಕಟ್ಟಡಗಳಲ್ಲೇ ಸ್ಥಳಾವಕಾಶ ಮಾಡಿಕೊಡಲಾಗಿದೆ. 

ಇಂಥದ್ದೊಂದು ಕಾಳಜಿ ಜಿಲ್ಲಾಡಳಿತಕ್ಕೂ ಖಂಡಿತ ಇದ್ದೇ ಇರುತ್ತದೆಂಬ ನಂಬಿಕೆ ನಮ್ಮದು. ಆದ್ದರಿಂದ ರಾಮನಗರದಲ್ಲಿರುವ ಯಾವುದಾದರೊಂದು ಸರ್ಕಾರಿ ಕಛೇರಿಗಳ ಸಂಕೀರ್ಣದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಸಾಹಿತ್ಯ ಪರಿಷತ್ತಿಗೆ ಒಂದು ಕೊಠಡಿಯನ್ನು ನೀಡಿದರೆ ನಿಜಕ್ಕೂ ಕನ್ನಡ ಭಾಷೆ ಮತ್ತು ಸಾಹಿತ್ಯದ ಸೇವೆ ಮಾಡಿದಂತಾಗುತ್ತದೆ. ಪರಿಷತ್ತಿನವರು ಸಭೆ ಸೇರಿ ಚರ್ಚಿಸಲು, ಕಾರ್ಯಕ್ರಮಗಳನ್ನು ರೂಪಿಸಲು ಇದರಿಂದ ಸಹಾಯವಾಗುತ್ತದೆ. ಇದೊಂದು ಕಾರ್ಯವನ್ನು ಸಾಧ್ಯವಾಗಿಸಲೆಂಬುದು ನನ್ನ ಕಳಕಳಿಯ ಮನವಿಯಾಗಿದೆ.

 

ಕಡೆಯಲ್ಲಿ ಒಂದಿಷ್ಟು ಕೃತಜ್ಞತೆ:

ಕನ್ನಡ ಸಾಹಿತ್ಯ ಸಮ್ಮೇಳನವೊಂದರ ಸರ್ವಾಧ್ಯಕ್ಷತೆಯ ಗೌರವ ಇಂದು ನನ್ನದಾಗಿದೆ. ನನ್ನ ಈವರೆಗಿನ ಬೆಳವಣಿಗೆಯಲ್ಲಿ ಹಲವರ ಹಾರೈಕೆ, ನೆರವು ಮತ್ತು ಸಹಕಾರಗಳಿವೆ. ನನಗೆ ಜನ್ಮ ನೀಡಿದ ನನ್ನ ಅಪ್ಪ-ಅವ್ವ, ನನ್ನ ಕಷ್ಟ-ಸುಖಗಳೊಂದಿಗೆ ಸದಾ ನನ್ನೊಡನಿರುವ ನನ್ನ ಬಾಳ ಗೆಳತಿ ವಿ.ಜ್ಯೋತಿರಾಜ್, ಮಕ್ಕಳಾದ ಜೆ.ಆರ್.ಸೃಜನಾ, ಜೆ.ಆರ್.ಶಾಶ್ವತ್‍ರಾಜ್, ನನ್ನ ಸಾಹಿತ್ಯಾಸಕ್ತಿ ಬತ್ತಿ ಹೋಗದಂತೆ ಕಾಳಜಿ ವಹಿಸುತ್ತಾ ಬಂದಿರುವ ನನ್ನ ಪ್ರಿಯ ಮೇಷ್ಟ್ರುಗಳಾದ ಡಾ.ಸಿದ್ಧಲಿಂಗಯ್ಯ, ಡಾ.ಬರಗೂರು ರಾಮಚಂದ್ರಪ್ಪ, ಡಾ.ಬೈರಮಂಗಲ ರಾಮೇಗೌಡ-ಇವರೆಲ್ಲರಿಗೆ ನನ್ನ ಧನ್ಯವಾದಗಳು ಸಲ್ಲುತ್ತವೆ.

ನನ್ನಿಂದ ಹಾಡುಗಳನ್ನು ಬರೆಸಿ ರಾಗಸಂಯೋಜನೆ ಮಾಡಿ ಉತ್ಸಾಹ ತುಂಬಿದ ಎಚ್.ವಿ.ಹನುಮಂತು, ಬಿ.ವಿನಯ್‍ಕುಮಾರ್, ವಿ.ಲಿಂಗರಾಜು ಅವರಿಗೆ, ಬರವಣಿಗೆಗೆ ಅವಕಾಶ ನೀಡಿದ ದಲಿತ ಸಂಘರ್ಷ ಸಮಿತಿಯ ಒಡನಾಡಿಗಳಿಗೆ, ನನ್ನ ನಾಟಕಗಳನ್ನು ಆಕಾಶವಾಣಿಯಲ್ಲಿ ಪ್ರಸಾರ ಮಾಡಲು ಕಾರಣರಾದ ರಾ.ಬಿ.ನಾಗರಾಜ್ ಅವರಿಗೆ, ಸದಾ ನನ್ನೊಡನಿದ್ದು ವೈಚಾರಿಕ ಚರ್ಚೆಗೆ ಇಂಬು ನೀಡುವ ಜಿ.ಶಿವಣ್ಣ ಕೊತ್ತೀಪುರ ಅವರಿಗೆ, ನನ್ನ ಸಾಹಿತ್ಯಾಸಕ್ತಿಯನ್ನು ಪೋಷಿಸುತ್ತಾ ಬಂದಿರುವ ಶಿವಾಜಿರಾವ್, ಹೆಬ್ಬಾಲೆ ಲಿಂಗರಾಜು, ಸು.ಚಿ.ಗಂಗಾಧರಯ್ಯ, ಡಾ.ಎಂ.ಬೈರೇಗೌಡ, ಜಾಲಮಂಗಲ ನಾಗರಾಜು, ಬಿ.ಶ್ರೀಧರ್ ಹೊಸೂರು-ಇವರೆಲ್ಲರ ವಿಶ್ವಾಸಕ್ಕೆ ನಾನು ಸದಾ ಋಣಿ.

ಮತ್ತೆ ಮತ್ತೆ ಸಾಹಿತ್ಯ ಗೋಷ್ಠಿಗಳಲ್ಲಿ, ಚರ್ಚಾ ಕೂಟಗಳಲ್ಲಿ ಜೊತೆಯಾಗೋಣವೆಂದು ಆಶಿಸುತ್ತಾ, ಸದ್ಯಕ್ಕೆ ನನ್ನ ನುಡಿಗಳಿಗೆ ತಾತ್ಕಾಲಿಕ ವಿರಾಮ ನೀಡುತ್ತಿದ್ದೇನೆ. ಎಲ್ಲರಿಗೂ ನಮಸ್ಕಾರ.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಚನ್ನಪಟ್ಟಣ ಸರ್ಕಾರಿ ಶಾಲೆ ಮತ್ತು ಸಂಸ್ಥೆಗಳಲ್ಲಿ ಸರಣಿ ಕಳ್ಳತನ. ಪೋಲಿಸ್ ಇಲಾಖೆ ನಿರ್ಲಕ್ಷ್ಯ ಆರೋಪ
ಚನ್ನಪಟ್ಟಣ ಸರ್ಕಾರಿ ಶಾಲೆ ಮತ್ತು ಸಂಸ್ಥೆಗಳಲ್ಲಿ ಸರಣಿ ಕಳ್ಳತನ. ಪೋಲಿಸ್ ಇಲಾಖೆ ನಿರ್ಲಕ್ಷ್ಯ ಆರೋಪ

ಚನ್ನಪಟ್ಟಣ:ಜು/೦೭/೨೦/ಮಂಗಳವಾರ. ಚನ್ನಪಟ್ಟಣ ತಾಲೂಕಿನಲ್ಲಿ ಸರ್ಕಾರಿ ಶಾಲೆಗಳು, ವಸತಿ ಶಾಲೆಗಳು ಹಾಗೂ ಕೃಷಿ ಸಂಪರ್ಕ ಕೇಂದ್ರಗಳಲ್ಲಿ ಸರಣಿ ಕಳ್ಳ

ರಾಮನಗರ ಜಿಲ್ಲೆಯಲ್ಲಿ ಇಂದು ೨೯ ಸೋಂಕು ದೃಢ ಜಿಲ್ಲಾಧಿಕಾರಿ
ರಾಮನಗರ ಜಿಲ್ಲೆಯಲ್ಲಿ ಇಂದು ೨೯ ಸೋಂಕು ದೃಢ ಜಿಲ್ಲಾಧಿಕಾರಿ

ರಾಮನಗರ:ಜು/೦೬/೨೦/ಸೋಮವಾರ. ಜಿಲ್ಲೆಯಲ್ಲಿ ಇಂದು ೨೯ ಪಾಸಿಟಿವ್ ಪ್ರಕರಣಗಳು ದೃಢವಾಗಿದ್ದು, ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಒಟ್ಟು ೨೬೩ ಕ್ಕೆ ಏರಿಕೆಯಾಗಿವ

ರಾಮನಗರದಲ್ಲಿ ಮಂಗಳವಾರ ನಡೆಯಲಿವೆ ಏಳು ಕರಗಗಳು
ರಾಮನಗರದಲ್ಲಿ ಮಂಗಳವಾರ ನಡೆಯಲಿವೆ ಏಳು ಕರಗಗಳು

ರಾಮನಗರ : ನಗರದಲ್ಲಿ ಈ ಬಾರಿ ಏಳು ಕರಗಗಳು ಇದೇ 7 ರಂದು ಮಂಗಳವಾರ ನಡೆಯಲಿವೆ. ಕೊರೊನಾ ಹಿನ್ನಲೆಯಲ್ಲಿ ಎಲ್ಲಾ ಕರಗಗಳು ದೇವಸ್ಥಾನದ ಆವರಣದಲ್ಲೇ ಸರಳವಾಗಿ ನಡೆಯಲಿವೆ. ಈ ಬಾರಿ ಕೊಂಡೋತ್ಸವ ನಡೆಯುತ್ತಿಲ್ಲ.

ಕೊರೊನಾ: ಚನ್ನಪಟ್ಟಣ ದ ಮೂರು ಪ್ರಕರಣ ಸೇರಿ ಜಿಲ್ಲೆಯಲ್ಲಿ ಇಂದು ಆರು ಪ್ರಕರಣ ದಾಖಲು. ಜಿಲ್ಲಾಧಿಕಾರಿ.
ಕೊರೊನಾ: ಚನ್ನಪಟ್ಟಣ ದ ಮೂರು ಪ್ರಕರಣ ಸೇರಿ ಜಿಲ್ಲೆಯಲ್ಲಿ ಇಂದು ಆರು ಪ್ರಕರಣ ದಾಖಲು. ಜಿಲ್ಲಾಧಿಕಾರಿ.

ರಾಮನಗರ:ಜು/೦೫/೨೦/ಭಾನುವಾರ. ಚನ್ನಪಟ್ಟಣ ದ ಮೂರು ಪಾಸಿಟಿವ್ ಸೇರಿ  ಜಿಲ್ಲೆಯ

ರಾಮನಗರ ನಗರಸಭೆ ಕಣ್ಣಿಗೆ ಕಾಣದಾಯಿತೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಅವ್ಯವಸ್ಥೆ
ರಾಮನಗರ ನಗರಸಭೆ ಕಣ್ಣಿಗೆ ಕಾಣದಾಯಿತೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಅವ್ಯವಸ್ಥೆ

10 ದಿನಗಳಿಂದ ಕೆ ಎಸ್ ಆರ್ ಟಿ ಸಿ ಬಸ್ ಸ್ಟ್ಯಾಂಡ್ ಎದುರು ಟಾಯ್ಲೆಟ್ ನ ಚೇಂಬರ್ ನಲ್ಲಿ ಕೊಳಚೆ ನೀರು ತುಂಬಿ ಹರಿಯುತ್ತಿದ್ದರೂ ನಗರಸಭೆಯವರು ಯಾವುದೇ ರೀತಿಯ ದುರಸ್ತಿ ಕಾರ್ಯ ಮಾಡದೇ ಅಸಡ್ಡೆ ತೋರಿದ್ದಾರೆ ಇದರ ಪರಿಣಾಮ ಮೈಸೂರು ಕಡೆ ಹೋಗುವ ಪ್

ತಮ್ಮ ಜೀವನದ ದುಡಿಮೆಯನ್ನು ಪತ್ರಿಕೆಗಳನ್ನು ಕೊಳ್ಳಲು ಉಪಯೋಗಿಸಿದ್ದ ಕಾಮಗೆರೆ ಲ. ಕೃಷ್ಣೇಗೌಡ
ತಮ್ಮ ಜೀವನದ ದುಡಿಮೆಯನ್ನು ಪತ್ರಿಕೆಗಳನ್ನು ಕೊಳ್ಳಲು ಉಪಯೋಗಿಸಿದ್ದ ಕಾಮಗೆರೆ ಲ. ಕೃಷ್ಣೇಗೌಡ

ರಾಮನಗರ : ಬೆಳಿಗ್ಗೆ ಬಂದ ಪತ್ರಿಕೆ ಮಧ್ಯಾಹ್ನವಾಗುವಷ್ಟರಲ್ಲಿ ಹಳತಾಗಿ ಹೋಗಿರುತ್ತದೆ. ಈಗ ಬೆಳಿಗ್ಗೆ ಸಂಜೆ ಎಲ್ಲಾ ಸಮಯದಲ್ಲ

ನೀಲಕಂಠನಹಳ್ಳಿ ಭರತ್ ರ ಸ್ವ ರಾಜಕೀಯ ಹಿತಕ್ಕಾಗಿ ನೀರಿನ ಘಟಕಕ್ಕೆ ವಿದ್ಯುತ್ ಬೋರ್ಡ್. ಗ್ರಾಮದ ಮುಖಂಡರ ಆಕ್ರೋಶ
ನೀಲಕಂಠನಹಳ್ಳಿ ಭರತ್ ರ ಸ್ವ ರಾಜಕೀಯ ಹಿತಕ್ಕಾಗಿ ನೀರಿನ ಘಟಕಕ್ಕೆ ವಿದ್ಯುತ್ ಬೋರ್ಡ್. ಗ್ರಾಮದ ಮುಖಂಡರ ಆಕ್ರೋಶ

ಚನ್ನಪಟ್ಟಣ:ಜು/೦೨/೨೦ಗುರುವಾರ. ತಾಲ್ಲೂಕಿನ ನೀಲಕಂಠನಹಳ್ಳಿ ಗ್ರಾಮದ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಭರತ್ ರವರು ಮುಂದಿನ ೨೦೨೦ ರ ಗ್ರಾಮ ಪಂಚಾಯಿತ

ಕಳೆಯಿಲ್ಲದ ತಾಲ್ಲೂಕು ಕಾಂಗ್ರೆಸ್ ಕಛೇರಿ, ಅಲ್ಲಲ್ಲಿ ಡಿಕೆಶಿ ಪದಗ್ರಹಣ ಸಂಭ್ರಮ ಕಣ್ತುಂಬಿಕೊಂಡ ಅಭಿಮಾನಿಗಳು
ಕಳೆಯಿಲ್ಲದ ತಾಲ್ಲೂಕು ಕಾಂಗ್ರೆಸ್ ಕಛೇರಿ, ಅಲ್ಲಲ್ಲಿ ಡಿಕೆಶಿ ಪದಗ್ರಹಣ ಸಂಭ್ರಮ ಕಣ್ತುಂಬಿಕೊಂಡ ಅಭಿಮಾನಿಗಳು

ಚನ್ನಪಟ್ಟಣ:ಜು/೦೨/೨೦/ಗುರುವಾರ. ಇಂದು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾಗಿ ಪದಗ್ರಹಣ ಮಾಡುತ್ತಿರುವ ಸಂದರ್ಭದಲ್ಲಿ ತಾಲ್ಲೂಕಿನ ಕಾಂಗ್ರೆಸ್ ಪ

ದೇವರಹೊಸಹಳ್ಳಿ ಸಂಜೀವರಾಯಸ್ವಾಮಿ ಜಾತ್ರೆ ರದ್ದುಪಡಿಸಿದ ತಾಲ್ಲೂಕು ಆಡಳಿತ
ದೇವರಹೊಸಹಳ್ಳಿ ಸಂಜೀವರಾಯಸ್ವಾಮಿ ಜಾತ್ರೆ ರದ್ದುಪಡಿಸಿದ ತಾಲ್ಲೂಕು ಆಡಳಿತ

ಚನ್ನಪಟ್ಟಣ:ಜು/೦೧/೨೦/ಬುಧವಾರ. ತಾಲ್ಲೂಕಿನ ಇತಿಹಾಸ ಪ್ರಸಿದ್ದ ಹಾಗೂ ಪುರಾಣ ಪ್ರಸಿದ್ದ ದೇವರಹೊಸಹಳ್ಳಿ ಗ್ರಾಮದ ಶ್ರೀ ಸಂಜೀವರಾಯಸ್ವಾಮಿ ಜಾತ್ರೆ

ಬನ್ನಿಮಹಾಂಕಾಳಿ ಅಮ್ಮನವರ ಕರಗ ಮಹೋತ್ಸವ ಮಂಗಳವಾರ
ಬನ್ನಿಮಹಾಂಕಾಳಿ ಅಮ್ಮನವರ ಕರಗ ಮಹೋತ್ಸವ ಮಂಗಳವಾರ

ರಾಮನಗರ : ನಗರದ ಮಂಡಿಪೇಟೆಯಲ್ಲಿರುವ ಬನ್ನಿಮಹಾಂಕಾಳಿ ಅಮ್ಮನವರು ನಗರದ ಶಕ್ತಿ ದೇವತೆ. ಸುಮಾರು ನಾನೂರು  ವರ್ಷಗಳಿಂದ ಇಲ್ಲಿನ ಭಕ್ತರು ಆರಾಧಿಸುತ್ತಾ ಬಂದಿದ್ದಾರೆ.

ನಾನೂರು ವರ್ಷ

Top Stories »  


Top ↑