Tel: 7676775624 | Mail: info@yellowandred.in

Language: EN KAN

    Follow us :


ಹೊಸ ಕಲಾವಿದರನ್ನು ಹುಟ್ಟು ಹಾಕಲು ಪ್ರಾಥಮಿಕ ಶಾಲಾ ಮಕ್ಕಳ ಪ್ರತಿಭಾಕಾರಂಜಿ ಪೂರಕ

Posted Date: 20 Sep, 2019

ಹೊಸ ಕಲಾವಿದರನ್ನು ಹುಟ್ಟು ಹಾಕಲು ಪ್ರಾಥಮಿಕ ಶಾಲಾ ಮಕ್ಕಳ ಪ್ರತಿಭಾಕಾರಂಜಿ ಪೂರಕ

ಚನ್ನಪಟ್ಟಣ: ಸರ್ಕಾರದ ವತಿಯಿಂದ ಕನ್ನಡ ಸಂಸ್ಕೃತಿ ಇಲಾಖೆಯು ಸಂಘಸಂಸ್ಥೆಗಳಿಗೆ ಕೊಡಮಾಡುವ ಅನುದಾನದ ಬದಲು ಪ್ರಾಥಮಿಕ ಶಾಲಾ ಮಟ್ಟದಲ್ಲಿ ಕಲೆಗೆ ಸಂಬಂಧಿಸಿದ ಶಿಕ್ಷಕರನ್ನು ನೇಮಿಸಿ ಕಲೆಯನ್ನು ಒಂದು ವಿಷಯವನ್ನಾಗಿಸಿ ಕಲಿಸುವ ಮೂಲಕ ಭವಿಷ್ಯದ ಕಲಾವಿದರನ್ನು ಹುಟ್ಟು ಹಾಕಬೇಕೆಂದು ತಾಲ್ಲೂಕು ಪಂಚಾಯತಿ ಅಧ್ಯಕ್ಷ ಹರೂರು ರಾಜಣ್ಣ ಅಭಿಪ್ರಾಯ ಪಟ್ಟರು.

ಅವರು ರಾಮನಗರ ಜಿಲ್ಲಾ ಪಂಚಾಯತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಚನ್ನಪಟ್ಟಣ ವತಿಯಿಂದ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಕನ್ನಡ ಸಂಸ್ಕೃತಿ ಇಲಾಖೆಯಿಂದ ಹಲವಾರು ಸಾಂಸ್ಕೃತಿಕ ಸಂಘಟನೆಗಳಿಗೆ ಕೋಟ್ಯಾಂತರ ರೂಪಾಯಿ ಅನುದಾನ ಕೊಡುತ್ತಿದ್ದು ಸರಿಯಾಗಿ ಸದ್ಬಳಕೆ ಆಗುತ್ತಿಲ್ಲ ಮತ್ತು ಹೊಸ ಕಲಾವಿದರು ತಯಾರಾಗುತ್ತಿಲ್ಲ, ಅದೇ ಅನುದಾನವನ್ನು ಪ್ರಾಥಮಿಕ ಶಾಲೆಯಲ್ಲಿ ಕಲಾ ವಿಷಯವನ್ನು ಪಠ್ಯ ಪುಸ್ತಕ ಮಾಡಿ ಶಿಕ್ಷಕರನ್ನು ನೇಮಿಸಿದರೆ ನಮ್ಮ ಜಾನಪದ ಕಲೆ ಉಳಿಸುವ ಹಾಗೂ ನವ ಕಲಾವಿದರನ್ನು ಹುಟ್ಟು ಹಾಕಲು ಅನುಕೂಲವಾಗುತ್ತದೆ ಎಂದರು.


ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಸೀತಾರಾಮು ಮಾತನಾಡಿ ಶಾಲಾ ಮಟ್ಟದಲ್ಲಿ ಮಾತ್ರ ನಡೆಯುತ್ತಿದ್ದ ಪ್ರತಿಭಾ ಕಾರಂಜಿಯ ಕಾರ್ಯಕ್ರಮಗಳು ಇಂದು ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ನಡೆಯಲು ಕಾರಣರಾದ ಇಲಾಖೆ ಮತ್ತು ಸರ್ಕಾರದ ಕ್ರಮ ಶ್ಲಾಘನೀಯ ವಾದದ್ದು, ಎಲ್ಲಾ ಶಾಲೆಯ ಮಕ್ಕಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಗುರುತಿಸಿಕೊಳ್ಳಲು ಸಹಕಾರಿಯಾಗಿದೆ, ಶಿಕ್ಷಕರು ಮತ್ತು ಪೋಷಕರು ತಮ್ಮ ಮಕ್ಕಳನ್ನು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಶೋಭಿಸುವಂತೆ ಮಾಡಬೇಕು ಎಂದರು.


ಕ್ಲಸ್ಟರ್ ಮಟ್ಟದಲ್ಲಿ ವಿಜೇತರಾದ ತಾಲ್ಲೂಕಿನ ಎಲ್ಲಾ ಶಾಲೆಯ ಮಕ್ಕಳು ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕನ್ನಡ ಭಾಷಣ, ಆಂಗ್ಲ ಭಾಷಣ, ಉರ್ದು ಭಾಷಣ, ಹಿಂದಿ ಭಾಷಣ, ಅರೆಬಿಕ್ ಧಾರ್ಮಿಕ ಪಠಣ, ಸಂಸ್ಕೃತ ಧಾರ್ಮಿಕತೆ ಪಠಣ, ಜಾನಪದ ಗೀತೆ, ಭಾವಗೀತೆ, ಹಾಸ್ಯ, ಗಜಲ್, ಆಶುಭಾಷಣ, ರಂಗೋಲಿ, ಕಲೋತ್ಸವಗಳಾದ ಭರತನಾಟ್ಯ ನಾಟಕ, ನೃತ್ಯ ಮತ್ತು ದೃಶ್ಯಕಲೆ ಗಳಾದ ಚಿತ್ರಕಲೆ, ರೇಖಾಚಿತ್ರ, ಕರಕುಶಲ, ಶಿಲ್ಪಕಲೆ ಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಹೊರೆ ಹಚ್ಚಿದರು.

ಇದೇ ವೇಳೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರನ್ನು ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹ ಇಲಾಖೆಯ ಸಿದ್ದರಾಜು, ಕ್ಷೇತ್ರ ಸಮನ್ವಯಾಧಿಕಾರಿ ಎಸ್ ವಿ ಕುಸುಮಲತಾ, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರು, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ, ಪದಾಧಿಕಾರಿಗಳಾದ ರಂಗನಾಥ, ರಾಜಶೇಖರ, ಜಯರಾಮು, ಗಂಗಾಧರ, ರಾಜಶೇಖರ, ನಂ ಶಿವಲಿಂಗಯ್ಯ ಮತ್ತಿತರರು ಹಾಜರಿದ್ದರು.

ಎಲ್ಲಾ ಶಾಲೆಯ ಶಿಕ್ಷಕ ಶಿಕ್ಷಕಿಯರು, ಶಿಕ್ಷಣ ಇಲಾಖೆಯ ಹಲವು ಅಧಿಕಾರಿಗಳು ಮತ್ತು ಪೋಷಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑