Tel: 7676775624 | Mail: info@yellowandred.in

Language: EN KAN

    Follow us :


ಹೈನೋದ್ಯಮವನ್ನು ಹತ್ತಿಕ್ಕುವ ಕೆಲಸ ಕೈಬಿಡಬೇಕು ಕಕಜವೇ ರಮೇಶ್ ಗೌಡ

Posted Date: 15 Oct, 2019

ಹೈನೋದ್ಯಮವನ್ನು ಹತ್ತಿಕ್ಕುವ ಕೆಲಸ ಕೈಬಿಡಬೇಕು ಕಕಜವೇ ರಮೇಶ್ ಗೌಡ

ಚನ್ನಪಟ್ಟಣ: ರಾಜ್ಯದಲ್ಲಿ ಹೈನುಗಾರಿಕೆಯನ್ನೇ ನಂಬಿಕೊಂಡಿರುವ ಲಕ್ಷಾಂತರ ಕುಟುಂಬಗಳಿದ್ದು ಹಾಲು ಮತ್ತು ಅದರ ಉಪ ಉತ್ಪನ್ನಗಳಲ್ಲಿಯೂ ದೇಶ ಮುಂಚೂಣಿಯಲ್ಲಿದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ನೆರವು ನೀಡಿ ಉತ್ತೇಜಿಸಿದರೆ ಇಡೀ ಪ್ರಪಂಚದಲ್ಲೇ ಪ್ರಥಮ ಸ್ಥಾನ ಗಳಿಸುವುದರಲ್ಲಿ ಅನುಮಾನವಿಲ್ಲ ಇಂತಹ ಸಮಯದಲ್ಲಿ ಕೇಂದ್ರ ಸರ್ಕಾರವು ಹಾಲು ಮತ್ತು ಉಪ ಉತ್ಪನ್ನಗಳನ ಆಮದು ಮಾಡಿಕೊಳ್ಳುತ್ತಿರುವುದು ರೈತರನ್ನು ಹತ್ತಿಕ್ಕುವ ಕೆಲಸವಾಗಿದೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ಎಲ್ ರಮೇಶಗೌಡ ಒತ್ತಾಯಿಸಿದರು.

ಅವರು ಇಂದು ನಗರದ ಅಂಚೆ ಕಛೇರಿ ರಸ್ತೆಯ ಕಾವೇರಿ ವೃತ್ತ ದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.


ಮುಕ್ತ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಹೊರದೇಶಗಳಿಂದ ಆಮದು ಮಾಡಿಕೊಂಡರೆ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ. ಆದ್ದರಿಂದ ಕೇಂದ್ರ ಸರ್ಕಾರ ಈ ಯೋಜನೆಯನ್ನು ಕೈ ಬಿಡಬೇಕು. ಕೇಂದ್ರ ಸರ್ಕಾರ ವಿದೇಶದಿಂದ ಸುಂಕ ರಹಿತವಾಗಿ ಹಾಲು ಆಮದು ಮಾಡಿಕೊಳ್ಳುವುದು ಸೂಕ್ತವಲ್ಲ, ಆಗ್ನೇಯ ರಾಷ್ಟ್ರಗಳ ಒಕ್ಕೂಟ (ಆಸಿಯಾನ್)ದಲ್ಲಿ ಮುಕ್ತ ವ್ಯಾಪಾರ ಒಪ್ಪಂದದ ಪ್ರಕಾರ ಆಸಿಯಾನ್ ಸದಸ್ಯ ರಾಷ್ಟ್ರಗಳಿಂದ ಹಾಲು ಹಾಗೂ ಅದರ ಉಪ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸುವುದರಿಂದ ದೇಶದ ಹೈನುಗಾರಿಕೆಯ ಮೇಲೆ ವಿಶೇಷವಾಗಿ ಗುಜರಾತ್ ಹಾಗೂ ಕರ್ನಾಟಕದ ಮೇಲೆ ದೊಡ್ಡ ಪ್ರಮಾಣದ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದ ಅವರು,

ಕೆಎಂಎಫ್ ಹೊರತಾಗಿಯೂ ಖಾಸಗಿ ಡೈರಿಗಳು ಹಾಗೂ ನೇರವಾಗಿ ಗ್ರಾಹಕರ ಮನೆಗಳಿಗೆ ಹಾಲು ತಲುಪಿಸುವ ಗೌಳಿಗರು ಲಕ್ಷಾಂತರ ಜನರು ಹೈನುಗಾರಿಕೆಯನ್ನೇ ನೆಚ್ಚಿಕೊಂಡಿದ್ದು ಕೇಂದ್ರ ಸರ್ಕಾರ ವಿದೇಶಿ ಹಾಲು ಆಮದು ಮಾಡಿಕೊಳ್ಳಲು ಅನುಮತಿ ನೀಡಿದರೆ, ಲಕ್ಷಾಂತರ ಜನರ ಬದುಕು ಬೀದಿಗೆ ಬೀಳಲಿದ್ದು, ಒಂದು ವೇಳೆ ಭಾರತ ನ್ಯೂಜಿಲ್ಯಾಂಡ್ ಜೊತೆಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡು ಹಾಲಿನ ಆಮದು ಮಾಡಿಕೊಳ್ಳಲು ಆರಂಭಿಸಿದರೆ, ದೇಶದಲ್ಲಿ ಹೈನುಗಾರಿಕೆಯನ್ನು ನಂಬಿಕೊಂಡಿರುವ ಕುಟುಂಬಗಳನ್ನು ಸರ್ಕಾರವೇ ಬೀದಿಗೆ ತಳ್ಳಿದಂತಾಗುತ್ತದೆ ಎಂದರು.


ವಿದೇಶಿ ಸಂಸ್ಥೆಗಳು ಆರಂಭದಲ್ಲಿ  ಕಡಿಮೆ ದರಕ್ಕೆ ಹಾಲು ನೀಡಿ, ಮಾರುಕಟ್ಟೆಯನ್ನು ವಶಪಡಿಸಿಕೊಂಡ ನಂತರ, ಹಾಲಿನ ಬೆಲೆ ಹೆಚ್ಚಳ ಮಾಡುವ ಸಾಧ್ಯತೆ ಇದ್ದು, ವಿದೇಶಿ ಸಂಸ್ಥೆಗಳು ನೇರವಾಗಿ ಮಾರುಕಟ್ಟೆ ಪ್ರವೇಶ ಮಾಡುವುದರಿಂದ ಹಾಲಿನ ದರ ನಿಯಂತ್ರಿಸಲೂ ರಾಜ್ಯ ಸರ್ಕಾರಗಳಿಗೆ ಯಾವುದೇ ಅಧಿಕಾರ ಇಲ್ಲದಂತಾಗಲಿದ್ದು, ಇದರಿಂದ ಹೈನುಗಾರಿಕೆ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀಳುವುದು ಶತಃ ಸಿದ್ದ. ಇದು ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಗೂ ಮಾರಕವಾಗುತ್ತದೆ ಎನ್ನುವುದನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವುದು ಅವಶ್ಯಕವಾಗಿದೆ ಎಂದು ತಿಳಿಸಿದರು.


ಇದೇ ವೇಳೆ ಪ್ರತಿಭಟನಾಕಾರರು ಜನಸಾಮಾನ್ಯರಿಗೆ ಹಾಲನ್ನು ಉಚಿತವಾಗಿ ವಿತರಿಸಿದರು.

ಪ್ರತಿಭಟನೆಯಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಮಂಗಳಮ್ಮ, ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ, ರಾಜ್ಯ ಯುವ ಘಟಕದ ಉಪಾಧ್ಯಕ್ಷ ರಂಜಿತ್‌ಗೌಡ, ಆಟೋ ಘಟಕದ ಅಧ್ಯಕ್ಷ ವೆಂಕಟೇಶ್, ತಿಮ್ಮರಾಜು, ವೇದಿಕೆ ಪದಾಧಿಕಾರಿಗಳಾದ ಮರಿಅಂಕೇಗೌಡ, ಚಿಕ್ಕೇನಹಳ್ಳಿ ರಾಮಚಂದ್ರು, ವಿರುಪಸಂದ್ರ ಮಂಗಳಮ್ಮ, ಸತೀಶ್, ಯೇಸು, ಟೆಂಪೋ ರಾಜೇಶ್, ಮಂಗಳವಾರಪೇಟೆ ನಾಗೇಶ್, ತೌಟನಹಳ್ಳಿ ರಾಮಚಂದ್ರು, ಕೃಷ್ಣದೇವ್, ಶ್ಯಾಮ್, ಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑