Tel: 7676775624 | Mail: info@yellowandred.in

Language: EN KAN

    Follow us :


ನಾವೂ ಹೊರಹೋಗಲ್ಲ, ನೀವು ಬರಬೇಡಿ. ಕೊರೊನಾ ಬಗ್ಗೆ ಎಚ್ಚರಿಕೆ ವಹಿಸಿದ ಕೆಲವು ಗ್ರಾಮಸ್ಥರು

Posted Date: 27 Mar, 2020

ನಾವೂ ಹೊರಹೋಗಲ್ಲ, ನೀವು ಬರಬೇಡಿ. ಕೊರೊನಾ ಬಗ್ಗೆ ಎಚ್ಚರಿಕೆ ವಹಿಸಿದ ಕೆಲವು ಗ್ರಾಮಸ್ಥರು

ಗೋವಿಂದೇಗೌಡನದೊಡ್ಡಿ ಮತ್ತು ಚನ್ನಂಕೇಗೌಡನದೊಡ್ಡಿ ಗ್ರಾಮದ ಯುವಕರಿಗೆ ತಿಳಿ ಹೇಳುತ್ತಿರುವ ಸಬ್ ಇನ್ಸ್‌ಪೆಕ್ಟರ್

ಚನ್ನಪಟ್ಟಣ:ಮಾ/೨೬/೨೦/ಗುರುವಾರ.ಕೊರೊನಾ ವೈರಸ್ ದಿನೇದಿನೇ ಹೆಚ್ಚಾಗುತ್ತಿರುವುದನ್ನು ನಿಧಾನವಾಗಿ ಅರ್ಥೈಸಿಕೊಳ್ಳುತ್ತಿರುವ ಗ್ರಾಮೀಣ ಭಾಗದ ಯುವಕರು ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದು, ನಮ್ಮ ಗ್ರಾಮದಿಂದ ಯಾರೂ ಹೊರಹೋಗುವುದಿಲ್ಲ. ನಮ್ಮ ಗ್ರಾಮಗಳಿಗೆ ಬೇರೆ ಗ್ರಾಮದವರು ಬರುವುದು ಬೇಡ ಎಂದು ತಾಲ್ಲೂಕಿನ ಕೆಲ ಗ್ರಾಮದ ಗಡಿ ಭಾಗಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.


ವಂದಾರಗುಪ್ಪೆ ಗ್ರಾಮದಲ್ಲಿ ಹೆದ್ದಾರಿಯಿಂದ ಊರೊಳಗೆ ಹೋಗುವ ರೈಲ್ವೇ ಗೇಟ್, ದೇವರಹೊಸಹಳ್ಳಿ ಗ್ರಾಮದಿಂದ ಬರುವ ರಸ್ತೆ ಮತ್ತು ಕಣ್ವ ದಿಂದ ಬರುವ ರಸ್ತೆಯನ್ನು ಮುಚ್ಚಿದ ಗ್ರಾಮಸ್ಥರು, ನಿಷೇಧ ಜಾರಿಯಲ್ಲಿದ್ದರೂ ಸಹ ನಗರದಿಂದ ಒಂದು ಕೋಮಿನ ಯುವಕರು ಬೈಕ್ ನಲ್ಲಿ ಬಂದು ಸುತ್ತು ಹಾಕುತ್ತಿದ್ದಾರೆ.


ಕೆಲವು ಜಮೀನುಗಳಿಗೆ ನುಗ್ಗಿ ನೀರಿನ ತೊಟ್ಟಿಯಲ್ಲಿ ಈಜಾಡುವುದಲ್ಲದೆ ಬೈಕ್ ವ್ಹೀಲಿಂಗ್ ಮಾಡುತ್ತಿದ್ದು ಗ್ರಾಮಸ್ಥರು ಯುವಕರ ಅಜಾಗರೂಕತೆ ಹಾಗೂ ಕೊರೊನಾ ವೈರಸ್ ಬಗ್ಗೆ ಆತಂಕಗೊಂಡಿರುವುದರಿಂದ ನಮ್ಮೂರಿಗೆ ಪರ ಊರಿನವರು ಬರದಂತೆ ಎಚ್ಚರವಹಿಸಿರುವುದಾಗಿ ತಿಳಿಸಿದರು.

ಈ ಸಮಯದಲ್ಲಿ ಜೆಡಿಎಸ್ ಮುಖಂಡ ವಿ ಬಿ ಚಂದ್ರು, ಗ್ರಾಮ ಪಂಚಾಯತಿ ಸದಸ್ಯೆ ವಿಮಲಾ, ಕಿರಣ್, ನಂದೀಶ ಸೇರಿದಂತೆ ಗ್ರಾಮದ ಹಿರಿಯರು ಹಾಗೂ ಯುವಕರು ಪಾಲ್ಗೊಂಡಿದ್ದರು.


ತಾಲ್ಲೂಕಿನ ಗೋವಿಂದೇಗೌಡನದೊಡ್ಡಿ ಮತ್ತು ಚನ್ನಂಕೇಗೌಡನದೊಡ್ಡಿ ಗ್ರಾಮದ ಯುವಕರು ಸಹ ನೀಲಕಂಠನಹಳ್ಳಿ, ಹೊಡಿಕೆಹೊಸಹಳ್ಳಿ ಮತ್ತು ಕೂಡ್ಲೂರು ಗ್ರಾಮದ ಗಡಿ ಭಾಗದಲ್ಲಿ ಮರದ ದಿಮ್ಮಿಗಳನ್ನು ಇಟ್ಟು ಯಾರೂ ನಮ್ಮೂರಿನೊಳಗೆ ಬರಬಾರದೆಂದು ತಡೆ ಹಿಡಿದರು‌.

ನಮ್ಮೂರಿನ ಕೆಲ ಕಿರಾಣಿ ಅಂಗಡಿಗಳಲ್ಲಿ, ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಅಕ್ಕಪಕ್ಕದ ಗ್ರಾಮಸ್ಥರು ಹುಡುಕಿಕೊಂಡು ಬರುತ್ತಿರುವುದರಿಂದ ಪ್ರತಿದಿನವೂ ನೂರಾರು ಮಂದಿ ಬಂದು-ಹೋಗುತ್ತಿದ್ದಾರೆ.

ನಗರದ ಕೆಲ ಯುವಕರು‌ ಗಾಂಜಾ ಮತ್ತಿನಲ್ಲಿ‌ ಬೈಕ್ ರೈಡಿಂಗ್ ಮಾಡಿಕೊಂಡು ಬರುತ್ತಿರುವುದರಿಂದ ಇವರಿಗೇನಾದರೂ ಕೊರೊನಾ ಸೋಂಕು ಇದ್ದರೆ ನಮ್ಮೂರಿನ ಗತಿ ಏನು ಎಂದು ಪ್ರಶ್ನಿಸಿದರು.


ನಂತರ ಗ್ರಾಮಾಂತರ ಠಾಣೆಯ ಪೋಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಶಿವಕುಮಾರ್ ಮತ್ತು ಸಿಬ್ಬಂದಿಗಳು ಬಂದು ರಸ್ತೆಯನ್ನು ತೆರವುಗೊಳಿಸಿ ಯುವಕರಿಗೆ ತಿಳಿ ಹೇಳಿದರು.

ಮನೆಯಲ್ಲಿ ಕೂರಬೇಕಾದ ನೀವು ಗುಂಪುಗುಂಪಾಗಿ ಹೊರಬಂದಿರುವುದು ಕೊರೊನಾ ವೈರಸ್ ಗೆ ದಾರಿ ಮಾಡಿಕೊಟ್ಟಂತಾಗಿದೆ. ಅಕ್ರಮ ಚಟುವಟಿಕೆಗಳಿದ್ದರೆ ಲಿಖಿತವಾಗಿ ನಮಗೆ ದೂರು ನೀಡಿದರೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳುತ್ತೇವೆ ಎಂದರು.

ಗ್ರಾಮದ ಅಂಗಡಿಗಳನ್ನು ಮುಚ್ಚಿಸಿ, ಯುವಕರನ್ನು ಚದುರಿಸಿ ಕಳುಹಿಸಿದರು.


ರಸ್ತೆ ತಡೆಯಲ್ಲಿ ಗ್ರಾಮಗಳ ಮುಖಂಡರಾದ ರಾಮಕೃಷ್ಣ, ವಿಜೇಂದ್ರ, ರೈಲ್ವೇ ಚನ್ನೇಗೌಡ, ಕುಮಾರ, ಚಿಕ್ಕತಿಮ್ಮಯ್ಯ ಸೇರಿದಂತೆ ಅನೇಕ ಯುವಕರು ಪಾಲ್ಗೊಂಡಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑