Tel: 7676775624 | Mail: info@yellowandred.in

Language: EN KAN

    Follow us :


ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಜನಜಾಗೃತಿ ಅಭಿಯಾನ

Posted Date: 05 Apr, 2020

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಜನಜಾಗೃತಿ ಅಭಿಯಾನ

ರಾಮನಗರ : ಕೊರೊನಾ ಸೋಂಕಿನಿಂದ ಇಡೀ ಜಗತ್ತು ತಲ್ಲಣಗೊಂಡಿದೆ. ಈ ಸೋಂಕು ಹರಡುವಿಕೆ ತಡೆಗೆ ಸಾಮಾಜಿಕ ಅಂತರವೇ ಮದ್ದು ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ತಿಳಿಸಿದರು.

ನಗರದ ಜಿಲ್ಲಾ  ಕಚೇರಿಗಳ ಆವರಣದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಸಮಿತಿ ಹಾಗೂ ಜಿಲ್ಲಾ ಕಾರ್ಮಿಕ ಇಲಾಖೆಯ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಅಸಂಘಟಿತ ಕಾರ್ಮಿಕರಿಗೆ ಮಾಸ್ಕ್, ಸಾನಿಟೈಸರ್, ಸೋಪು ವಿತರಣೆ ಹಾಗೂ ಕೊರೊನಾ ವೈರಸ್ ಸೋಂಕಿನ ಬಗ್ಗೆ ಜನಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೊರೊನಾ ಸೋಂಕಿನ ಭೀತಿಯಿಂದಾಗಿ ದೇಶದೆಲ್ಲೆಡೆ ಜನ ಆತಂಕಗೊಂಡಿದ್ದಾರೆ. ದಿನ ಕಳೆದಂತೆ ಸೋಂಕು ಪ್ರಕರಣಗಳು ಹೆಚ್ಚುತ್ತಿವೆ. ಕೊರೊನಾ ಸೋಂಕಿನ ಗಂಭೀರತೆಗೆ ಬಲಿಷ್ಠ ರಾಷ್ಟ್ರ ಅಮೆರಿಕದಲ್ಲೇ ಅಲ್ಲೋಲ ಕಲ್ಲೋಲವಾಗಿದೆ ಎಂದು ತಿಳಿಸಿದರು.

ಜಗತ್ತಿನ ಬಹುಪಾಲು ರಾಷ್ಟ್ರಗಳು ಈ ಸೋಂಕಿನಿಂದ ಅಪಾಯದ ಸ್ಥಿತಿಗೆ ತಲುಪಿವೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಅತಿ ಜನಸಂಖ್ಯೆಯಿರುವ ಭಾರತದಲ್ಲಿ ಕೊರೊನಾ ಸೋಂಕು ಉಲ್ಬಣಿಸಿದರೆ ಅಪಾರ ಸಾವು ನೋವು ಸಂಭವಿಸುತ್ತವೆ ಎಂದು ಎಚ್ಚರಿಸಿದರು.
ರೋಗ ನಿಯಂತ್ರಣಕ್ಕೆ ಜನರು ಸರ್ಕಾರದ ಜತೆ ಕೈಜೋಡಿಸಬೇಕು. ಜನರು ಸರ್ಕಾರದ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸೋಂಕಿನ ಲಕ್ಷಣ ಕಂಡು ಬಂದ ತಕ್ಷಣ ಆಸ್ಪತ್ರೆಗೆ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಅಂಗಡಿ ಅಥವಾ ಮಾರುಕಟ್ಟೆಗಳಿಗೆ ಹೋದಾಗ ಕಟ್ಟುನಿಟ್ಟಾಗಿ ಸಾಮಾಜಿಕ ಅಂತರ ಪಾಲಿಸಬೇಕು ಎಂದರು.
ಪ್ರತಿಯೊಬ್ಬರೂ ದಿಗ್ಬಂಧನ ಆದೇಶ ಪಾಲಿಸಬೇಕು. ಮನೆಗಳಲ್ಲೇ ಇದ್ದು, ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸದ್ಯ ನಗರ ಪ್ರದೇಶಕ್ಕೆ ನಗರಕ್ಕೆ ಸೀಮಿತವಾಗಿರುವ ಈ ಕಾಯಿಲೆಯು ಗ್ರಾಮೀಣ ಭಾಗದಲ್ಲಿ ಹರಡದಂತೆ ಮುನ್ನಚ್ಚರಿಕೆ ವಹಿಸಬೇಕು. ಹೊರ ಜಿಲ್ಲೆ, ರಾಜ್ಯ ಅಥವಾ ದೇಶಗಳಿಂದ ಯಾರಾದರೂ ಗ್ರಾಮ ಅಥವಾ ನಗರಕ್ಕೆ ಬಂದರೆ ಆ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಕೊಡಬೇಕು ಎಂದು ಮನವಿ ಮಾಡಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾಧ್ಯಕ್ಷ ಎಚ್.ವಿ. ಶೇಷಾದ್ರಿ ಅಯ್ಯರ್ ಮಾತನಾಡಿ ಹಳ್ಳಿಗಳಲ್ಲಿ ಈ ಸೋಂಕು ಹರಡಿದರೆ ರೈತರ ಬದುಕು ನರಕವಾಗುತ್ತದೆ. ಕೃಷಿ ಚಟುವಟಿಕೆ ಸ್ಥಗಿತಗೊಂಡು ಆಹಾರ ಉತ್ಪಾದನೆ ಕುಸಿಯುತ್ತದೆ. ಇದರಿಂದ ಇಡೀ ದೇಶ ಸಂಕಷ್ಟ ಎದುರಿಸಬೇಕಾಗುತ್ತದೆ. ಆದ್ದರಿಂದ ಎಲ್ಲರೂ ಸರ್ಕಾರದ ಸುರಕ್ಷತಾ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಕಾರ್ಮಿಕಾಧಿಕಾರಿ ಶೇಖರ ಎಸ್. ಗಢದ ಮಾತನಾಡಿ ಕೊರೊನಾ ವೈರಸ್ ಸೋಂಕು ತಡೆಯಲು ಎಲ್ಲರೂ ಕನಿಷ್ಠ ಕ್ರಮಗಳನ್ನು ಕೈಗೊಳ್ಳಬೇಕು. ಕೈ ತೊಳೆದುಕೊಳ್ಳುವುದು, ಮೂಗು, ಕಣ್ಣುಗಳನ್ನು ಮುಟ್ಟದೇ ಇರುವುದು ಸೇರಿದಂತೆ ವೈಯಕ್ತಿಕ ಸ್ವಚ್ಛತೆಗೆ ಒತ್ತು ನೀಡಬೇಕು ಎಂದು ತಿಳಿಸಿದರು.
ಸಿಇಒ ಚಾಲನೆ : ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಅಸಂಘಟಿತ ಕಾರ್ಮಿಕರಿಗೆ ಮಾಸ್ಕ್, ಸಾನಿಟೈಸರ್, ಸೋಪು ವಿತರಣೆ ಹಾಗೂ ಕೊರೊನಾ ವೈರಸ್ ಸೋಂಕಿನ ಬಗ್ಗೆ ಜನಜಾಗೃತಿ ಅಭಿಯಾನಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಕ್ರಂ ಶನಿವಾರ ಚಾಲನೆ ನೀಡಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಕಾರ್ಯಕಾರಿ ಸಮಿತಿ ಪ್ರತಿನಿಧಿ ವಿ. ಬಾಲಕೃಷ್ಣ, ಪದಾಧಿಕಾರಿಗಳಾದ ಡಿ. ಕೆಂಪೇಗೌಡ, ಕೆ.ಎಸ್. ಶಂಕರಯ್ಯ, ಸಾಹುಕಾರ್ ಆಮ್ಜದ್, ಎಸ್. ರುದ್ರೇಶ್ವರ, ಅಮಿತ್ ರಾಜ್ ಶಿವ, ಕೆ.ಎಚ್. ಚಂದ್ರಶೇಖರಯ್ಯ, ಪರಮಶಿವಯ್ಯ, ಸಿಕಬತ್ ಉಲ್ಲಾ, ಬಿಳಿಗಿರಿರಂಗಸ್ವಾಮಿ, ಚಿಕ್ಕೇಗೌಡ, ಚಂದ್ರೇಗೌಡ, ತಿಪ್ಪೇರೇಗೌಡ, ಗೋವಿಂದಯ್ಯ, ಎಂ.ಎಸ್. ಲಾವಣ್ಯ, ಸುಧಾರಾಣಿ ಇದ್ದರು.

ಪೋಟೊ : ರಾಮನಗರ ಜಿಲ್ಲಾ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ಅಸಂಘಟಿತ ಕಾರ್ಮಿಕರಿಗೆ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಮಾಸ್ಕ್, ಸಾನಿಟೈಸರ್, ಸೋಪು ವಿತರಣೆ ಮಾಡಿದರು

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑