Tel: 7676775624 | Mail: info@yellowandred.in

Language: EN KAN

    Follow us :


ಜೆಸಿಬಿ ಮಾಲೀಕರು ಮತ್ತು ಗುತ್ತಿಗೆದಾರರ ಪಾಲಾದ ಮನರೇಗಾ ಕೂಲಿ ಹಣ. ಒತ್ತುವರಿ ತೆರವು ಮಾಡದೆ ಅಭಿವೃದ್ಧಿ!?

Posted Date: 02 Jun, 2020

ಜೆಸಿಬಿ ಮಾಲೀಕರು ಮತ್ತು ಗುತ್ತಿಗೆದಾರರ ಪಾಲಾದ ಮನರೇಗಾ ಕೂಲಿ ಹಣ. ಒತ್ತುವರಿ ತೆರವು ಮಾಡದೆ ಅಭಿವೃದ್ಧಿ!?

ಚನ್ನಪಟ್ಟಣ:ಜೂ/೦೨/೨೦/ಮಂಗಳವಾರ. ಚನ್ನಪಟ್ಟಣ ತಾಲ್ಲೂಕಿನಾದ್ಯಂತ ಇರುವ ಕಟ್ಟೆಗಳನ್ನು ಹೂಳೆತ್ತಿಸಿ, ಪಿಚ್ಚಿಂಗ್ (ಕಲ್ಲುಕಟ್ಟಡ) ಮಾಡಿಸಿ, ಸುತ್ತಲೂ ಗಿಡಗಳನ್ನು (ಪ್ಲಾಂಟೇಷನ್) ನೆಡಲು ಸರ್ಕಾರವು ಆದೇಶ ನೀಡಿದೆ.

ಲಾಕ್ಡೌನ್ ಸಮಯದಲ್ಲಿ ಕೂಲಿ ಕಾರ್ಮಿಕರಿಗೆ ಸಂಪಾದನೆ ಇಲ್ಲ ಎನ್ನುವುದನ್ನು ಮನಗಂಡ ಸರ್ಕಾರವು ಜಾಬ್ ಕಾರ್ಡ್ ಉಳ್ಳ ಕೂಲಿ ಕಾರ್ಮಿಕರು ಮನರೇಗಾ ಕೆಲಸ ಮಾಡುವುದರ ಮೂಲಕ ಅವರಿಗೆ ಹಣ ತಲುಪುತ್ತದೆ ಹಾಗೂ ಕಟ್ಟೆಗಳು ಸಹ ಮಳೆಗಾಲದಲ್ಲಿ ತುಂಬಿ ‌ಜನ-ಜಾನುವಾರುಗಳಿಗೆ ಅನುಕೂಲವಾಗಲಿ ಎಂದು ಈ ಯೋಜನೆಯನ್ನು ಜಾರಿಗೆ ತಂದಿದೆ.


ಆದರೆ ಈ ಯೋಜನೆಯು ಕೂಲಿ ಕಾರ್ಮಿಕರಿಗೆ ಶಾಪವಾಗಿ ಗ್ರಾಮ ಪಂಚಾಯತಿ ಅಧ್ಯಕ್ಷ, ಸದಸ್ಯರು, ಅಧಿಕಾರಿಗಳು, ಜೆಸಿಬಿ ಮಾಲೀಕರು ಮತ್ತು ಗುತ್ತಿಗೆದಾರರಿಗೆ ವರದಾನವಾಗಿ ಪರಿಣಮಿಸಿದ್ದು, ಆಡಳಿತ ಶಾಹಿ ಕಂಡು ಕಾಣದಂತೆ ಕಣ್ಮುಚ್ಚಿ ಕುಳಿತಿದೆ. ಕೊನೆಯ ಪಕ್ಷ ಬಿಲ್ ಮಾಡುವ ಮುನ್ನಾ ಅಭಿವೃದ್ಧಿ ಆಗಿದೆಯಾ ಇಲ್ಲವೇ ಎಂಬುದನ್ನು ಮೇಲ್ಮಟ್ಟದ ಅಧಿಕಾರಿಗಳು ಇದುವರೆಗೂ ಹೋಗಿ ಪರಿಶೀಲಿಸದಿರುವುದು ಆಡಳಿತಾಧಿಕಾರಿಗಳ ಶಾಮೀಲಾತಿಯನ್ನು ಬಹಿರಂಗಪಡಿಸುತ್ತಿದೆ.


ಬಹುತೇಕ ಎಲ್ಲಾ ಕಟ್ಟೆಗಳು ಒತ್ತುವರಿಯಾಗಿದ್ದು ತಹಶಿಲ್ದಾರ್ ಸುದರ್ಶನ್ ರವರ ಆಸಕ್ತಿಯಿಂದ ಸರ್ವೇ ಆಗಿ ಒತ್ತುವರಿ ತೆರವುಗೊಳಿಸಿದ್ದರೆ, ಈಗ ಅಭಿವೃದ್ಧಿ ಹೊಂದುತ್ತಿರುವ ಹಲವಾರು ಕಟ್ಟೆಗಳನ್ನು ಇನ್ನೂ ಸರ್ವೇ ಮಾಡಿಸಿಲ್ಲ. ಇದನ್ನು ಗಣನೆಗೆ ತೆಗೆದುಕೊಳ್ಳದೆ ಈಗ ಎಷ್ಟು ಅಗಲವಿದೆಯೋ ಅಷ್ಟೇ ಅಗಲ ಕಟ್ಟೆಯನ್ನು ಹೂಳೆತ್ತಿಸಿ, ಪಿಚ್ಚಿಂಗ್ ಮಾಡಿಸಿ ಸಾಕ್ಷಿ ಗುಡ್ಡೆ ತೋರಿಸುವ ಮೂಲಕ ಬಿಲ್ ಪಡೆಯಲು ದಾರಿ ಸುಗಮವಾಗಿಸಿಕೊಂಡಿದ್ದು, ಶೇಕಡಾ ೯೦ ಕ್ಕೂ ಹೆಚ್ಚು ಜೆಸಿಬಿ ಗಳೇ ಕೆಲಸ ನಿರ್ವಹಿಸಿವೆ.


ಸೋಜಿಗದ ವಿಷಯವೆಂದರೆ ಬಹುತೇಕ ಜಾಬ್ ಕಾರ್ಡ್ ಹೊಂದಿರುವ ಕೂಲಿ ಕಾರ್ಮಿಕರ ಖಾತೆಗೆ ನೇರವಾಗಿ ಹಣ ಜಮಾವಣೆ ಆಗುತ್ತಾದರೂ ಅವರ ಎಟಿಎಂ ಕಾರ್ಡ್ ಗುತ್ತಿಗೆದಾರರ ಬಳಿ ಇದೆಯಂತೆ. ದಬಾಯಿಸಿದ ಕೂಲಿಯವರಿಗೆ ನೂರಿನ್ನೂರು ರೂಪಾಯಿ ಕೊಟ್ಟು ಮಿಕ್ಕ ಹಣವನ್ನು ಲಪಟಾಯಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಗ್ರಾಮ ಪಂಚಾಯತಿ ಸದಸ್ಯರಿಗೆ ಇದು ಕೊನೆಯ ಅವಕಾಶವಾಗಿದ್ದು, ಬಾಚುವ ಕೆಲಸದಲ್ಲಿ ನಿರತರಾಗಿದ್ದು ಕೇಳುವವರೇ ಇಲ್ಲವಾಗಿದ್ದಾರೆ.


ಮನವಿ ಬಂದಿರುವ ಹಾಗೂ ನನ್ನ ಗಮನಕ್ಕೆ ಬಂದಿರುವ ಎಲ್ಲಾ ಕೆರೆಗಳು, ಕಟ್ಟೆಗಳು ಇನ್ನಿತರ ಸರ್ಕಾರಿ ಜಾಗಗಳನ್ನು ಜರೂರಾಗಿ ಸರ್ವೇ ಮಾಡಿಸುತ್ತಿದ್ದೇವೆ. ಸರ್ವೇಗೆ ಮುನ್ನವೇ ಅಭಿವೃದ್ಧಿ ಮಾಡಿದ್ದರೆ ಸರ್ವೇಯ ನಂತರ ಜಾಗ ವಶಪಡಿಸಿಕೊಂಡು ಸೂಕ್ತ ಬಂದೋಬಸ್ತ್ ಮಾಡಿಕೊಂಡು ಫೆನ್ಸಿಂಗ್ ಹಾಕಿ ನಂತರ ಅಭಿವೃದ್ಧಿ ಮಾಡಬೇಕಿದೆ.
ಬಿ ಕೆ ಸುದರ್ಶನ್, ತಹಶಿಲ್ದಾರರು ಚನ್ನಪಟ್ಟಣ


ಒಂದಷ್ಟು ಕಟ್ಟೆಗಳ ಸರ್ವೇ ಮುಗಿದಿದ್ದು, ಕೆಲಸ ಆರಂಭವಾಗಿದೆ, ಸರ್ವೇ ಆಗದೆ ಅಭಿವೃದ್ಧಿ ಹೊಂದಿದ ಕಟ್ಟೆಗಳ ಮಿಕ್ಕ ಜಾಗವನ್ನು ವಶಪಡಿಸಿಕೊಂಡು ಫೆನ್ಸಿಂಗ್ ಹಾಕಿಸಿ ಅಲ್ಲಿ ಪ್ಲಾಂಟೇಷನ್ ಮಾಡಲಾಗುವುದು.
ಚಂದ್ರು. ತಾ ಪಂ ಕಾ ನಿ ಅಧಿಕಾರಿ. ಚನ್ನಪಟ್ಟಣ


ದಿಬ್ಬ ಹೊಡೆಯದೆ, ಸಾಕ್ಷಿ ಗುಡ್ಡೆ ಉಳಿಸಿ ಹೂಳೆತ್ತಬೇಕು. ಕನಿಷ್ಠ ಒಂದು ಮೀಟರ್ ಸುತ್ತಳತೆಯಲ್ಲಿ ಪಿಚ್ಚಿಂಗ್ ಮಾಡಬೇಕು, ಸ್ವಲ್ಪ ಕೆಲಸ ಮಾಡಿ, ಮಳೆ ಬಂದಾಗ ನೀರು ತುಂಬಿಕೊಂಡರೆ ಗೊತ್ತಾಗುವುದಿಲ್ಲ. ಅಧಿಕಾರಿಗಳು ಈಗಲೇ ಅದನ್ನು ಗಮನಿಸಿ ಕೆಲಸ ಪೂರ್ಣವಾದ ಮೇಲೆ ಬಿಲ್ ಪಾಸು ಮಾಡಬೇಕು. ಕೆಲವು ಸರ್ಕಾರಿ ಕಟ್ಟೆಗಳಾದರೆ ಕೆಲವು ಸ್ವಂತ ಜಾಗದಲ್ಲಿವೆ. ಕೃಷಿ ಹೊಂಡಕ್ಕೆ ಮೊದಲ ಆದ್ಯತೆ ನೀಡಬೇಕಾಗಿದೆ. ಮನರೇಗಾ ಇರುವುದೇ ಕೂಲಿಕಾರ್ಮಿಕರಿಗಾಗಿ ಅವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೆಕಾಗಿರುವುದು ಅಧಿಕಾರಿಗಳ ಕರ್ತವ್ಯ.
ಹರೂರು ರಾಜಣ್ಣ. ತಾ ಪಂ ಅಧ್ಯಕ್ಷರು. ಚನ್ನಪಟ್ಟಣ


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑