Tel: 7676775624 | Mail: info@yellowandred.in

Language: EN KAN

    Follow us :


ಮಾದರಿ ಜೀವನ ನಡೆಸಿದ ಹುಣಸನಹಳ್ಳಿ ಸಹೋದರರು

Posted Date: 16 Apr, 2018

ಮಾದರಿ ಜೀವನ ನಡೆಸಿದ ಹುಣಸನಹಳ್ಳಿ ಸಹೋದರರು

        ಅಂದಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಗಿದ್ದ ಇಂದಿನ ರಾಮನಗರದಲ್ಲಿ ಜೆಡಿಎಸ್ ಪಕ್ಷ ಗಟ್ಟಿಯಾಗಿ ಬೆರೂರಲು ಕಾರಣರಾದವರು ಕೈಲಾಂಚ ಹೋಬಳಿ ಹುಣಸನಹಳ್ಳಿ ಗ್ರಾಮದ ಮಾರೇಗೌಡ ಕುಟುಂಬದವರು. 

    ಹುಣಸನಹಳ್ಳಿಯ ಮಾರೇಗೌಡರು ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಪೆರೇಡ್‌ಗೆ ರಾಮನಗರದಿಂದ ಪೂಜಾ ಕುಣಿತ ತಂಡವನ್ನು ಕರೆದುಕೊಂಡು ಹೋಗಿದ್ದರು. ಈ ಭಾಗದ ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ನ್ಯಾಯ, ಪಂಚಾಯಿತಿಯ ಮೂಲಕ ನ್ಯಾಯವನ್ನು ಕೊಡಿಸುತ್ತಿದ್ದರು. ಕೈಲಾಂಚ ಹೋಬಳಿಗೆ ಮೊದಲ ಪಂಪ್ ಸೆಟ್‌ ಅನ್ನು ತಂದ ಕೀರ್ತಿ ಇವರದು. ಇದರ ಜೊತೆಗೆ ವಿದ್ಯುತ್‌ ಕಬ್ಬು ಅರೆಯುವ ಗಾಣವನ್ನು ಹಾಕುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದರು. ರಾಮನಗರದಿಂದ ಹುಣಸನಹಳ್ಳಿಗೆ ರಸ್ತೆಯನ್ನು ಮಾಡಿಸಿದ್ದಾರೆ. ಮಾವಿನ ಸಸಿಗಳನ್ನು ಮೊದಲು ನೆಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ. 

    ಪೌರಾಣಿಕ ನಾಟಕಗಳನ್ನು ಆಯೋಜಿಸುವ ಮೂಲಕ ಕಲಾವಿದರಿಗೆ ವೇದಿಕೆಗಳನ್ನು ನೂರಾರು ವೇದಿಕೆಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಉತ್ತಮ ಬೇಟೆಗಾರರು ಆಗಿದ್ದ ಇವರು ಹುಣಸನಹಳ್ಳಿಗೆ 1965ರಲ್ಲೆ ನೂತನ ಅಂಬಾಸಿಡರ್ ಕಾರನ್ನು ತಂದಿದ್ದರು. ರೆಡಿಯೋವನ್ನು ಹುಣಸನಹಳ್ಳಿಗೆ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. 

    ಮಾರೇಗೌಡರು ತಮ್ಮ ಜೀವನದ ಪ್ರಾರಂಭದಿಂದಲೂ ಕಾಂಗ್ರೆಸ್ ಪಕ್ಷದ ವಿರೋಧಿಯಾಗಿದ್ದರು. ಇದೇ ಹೋಬಳಿಯ ಲಕ್ಕಪ್ಪನಹಳ್ಳಿಯ ಕೆಂಗಲ್‌ ಹನುಮಂತಯ್ಯ (ಮಾಜಿಮುಖ್ಯಮಂತ್ರಿ) ಇವರಿಗೆ ಪ್ರಬಲ ಪ್ರತಿಸ್ಫರ್ಧೆಯನ್ನು ಒಡ್ಡುತ್ತಿದ್ದರು. ಅಂದು ಅಸ್ತಿತ್ವದಲ್ಲಿದ್ದ ಸಂಸ್ಥಾ ಕಾಂಗ್ರೆಸ್ ಪಕ್ಷದ ಬಿ.ಆರ್. ಧನಂಜಯ ಶಾಸಕರಾಗಲು ಇವರ ಶ್ರಮ ಬಹುಪಾಲು ಇತ್ತು. (ವೀರೇಂದ್ರ ಪಾಟೀಲ್ ಅವರ ಅವಧಿಯಲ್ಲಿ). 

    ಇವರಿಗೆ ನಾಲ್ವರು ಗಂಡು ಮಕ್ಕಳು. ಎಚ್.ಎಂ. ನಂಜಪ್ಪ, ಎಚ್.ಎಂ. ಕಪನಯ್ಯ, ಎಚ್.ಎಂ.ಪುಟ್ಟಸ್ವಾಮಯ್ಯ ಹಾಗೂ ಎಚ್.ಎಂ. ರಾಮೇಗೌಡ (ಹುಣಸನಹಳ್ಳಿ ರಾಮಣ್ಣ). 

    ಎಚ್.ಎಂ. ನಂಜಪ್ಪ ಅವರು 87 ವರ್ಷಗಳ ಕಾಲ ಬದುಕಿದ್ದರು. ಇವರು 22 ವರ್ಷಗಳ ಕಾಲ ಹುಣಸನಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿದ್ದರು. ಹುಣಸನಹಳ್ಳಿಯಲ್ಲಿ ಹಾಲಿನ ಡೈರಿಯನ್ನು ಸ್ಥಾಪಿಸಿ. 20 ವರ್ಷಗಳ ಕಾಲ ಇದರ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿ, 8 ಲಕ್ಷ ಹಣವನ್ನು ಉಳಿಸಿದ್ದರು. ಜೊತೆಗೆ ಡೈರಿಗೆ ಸ್ವಂತ ಕಟ್ಟಡವನ್ನು ಕಟ್ಟಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು. 

    ರಾಮನಗರ ತಾಲ್ಲೂಕಿನ ರಾಜಕೀಯದ ಸಂಪೂರ್ಣ ಹಿಡಿತ ಹೊಂದಿದ್ದ ಇವರು ಎಂದಿಗೂ ಅಧಿಕಾರಕ್ಕೆ ಆಸೆ ಪಟ್ಟವರಲ್ಲ, ಅಹಂಕಾರದಿಂದ ವರ್ತಿಸಿದವರಲ್ಲ. ಯಾವಾಗಲೂ ಮೌನದಿಂದ ಇರುತ್ತಿದ್ದ ತಾವು ಅಂದುಕೊಂಡ ಕೆಲಸವನ್ನು ಮಾಡಿ ಮುಗಿಸುತ್ತಿದ್ದರು. ಆಡಂಬರದ ಜೀವನಕ್ಕೆ ಮಾರು ಹೋಗದೆ ಸರಳ ಜೀವನವನ್ನು ನಡೆಸುತ್ತಿದ್ದರು.

    1989ರಲ್ಲಿ ಜನತಾ ದಳ ವಿಭಾಗ ವಾದಾಗ ಎಚ್.ಡಿ. ದೇವೇಗೌಡರ ಪರವಾಗಿ ನಿಂತು ಅವರಲ್ಲಿ ಆತ್ಮಸ್ಥೈರ್ಯವನ್ನು ಹೆಚ್ಚಿಸಿದ್ದರು. ಜೊತೆಗೆ ಸಮಾಜವಾದಿ ಜನತಾ ಪಕ್ಷದಿಂದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿಯೂ ಆಯ್ಕೆಯಾಗಿದ್ದರು. ಹುಣಸನಹಳ್ಳಿಯ ಅಭಿವೃದ್ಧಿಗೆ ಕಾರಣರಾದ ನಂಜಪ್ಪ ಅವರ ನಿಧನರಾದಾಗ ಮಾಜಿಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್‌ ಅಂತಿಮ ನಮನ ಸಲ್ಲಿಸಲು ಬಂದಿದ್ದರು. 

    1994ರಲ್ಲಿ ಎಚ್.ಡಿ. ದೇವೇಗೌಡ ಅವರನ್ನು ರಾಮನಗರಕ್ಕೆ ಕರೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದವರು ನಂಜಪ್ಪ ಅವರು. ಈ ವಿಷಯವನ್ನು ಸ್ವತಃ ದೇವೇಗೌಡ ಅವರೆ ಹಲವು ಕಡೆ ತಮ್ಮ ಭಾಷಣಗಳಲ್ಲಿ ಹೇಳಿದ್ದಾರೆ.

    ನಂಜಪ್ಪ ಅವರು ವರದೇಗೌಡ, ಬಿ. ಪುಟ್ಟಸ್ವಾಮಯ್ಯ, ಬಿ.ಆರ್. ಧನಂಜಯ್ಯ, ಬೋರಯ್ಯ ಅವರ ಒಡನಾಟವನ್ನು ಹೊಂದಿದ್ದರು. 

    ಇವರ ಪತ್ನಿ ಮರಿಯಮ್ಮ, ಇವರ ಮಗ ಎಚ್.ಎನ್. ಲಕ್ಷ್ಮೀಕಾಂತ್ ತಾಲ್ಲೂಕು ಪಂಚಾಯಿತಿ ಸದಸ್ಯರಾಗಿದ್ದಾರೆ. ಜತೆಗೆ ಹುಣಸನಹಳ್ಳಿ ಗ್ರಾಮದ ಜನರ ಕಷ್ಟಸುಖಗಳಿಗೆ ಸ್ಪಂದಿಸುತ್ತಿದ್ದಾರೆ. ಎಚ್.ಎನ್. ನಾಗರಾಜು ಅವರು ಬೆಂಗಳೂರ ಡೈರಿಯಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಚ್.ಎನ್. ಲಿಂಗಪ್ಪ ಅವರು ವಾಪಾರಸ್ಥರಾಗಿದ್ದಾರೆ.

    ಎಚ್.ಎಂ. ಕಪನಯ್ಯ ಅವರು ರಂಗಭೂಮಿ ಕಲಾವಿದರಾಗಿ ನೂರಾರು ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿದ್ದರು. ರಾಮನಗರ ತಾಲ್ಲೂಕಿನ ರಂಗಭೂಮಿ ಬೆಳೆಯಲು ಇವರು ಕಾರಣ ಕರ್ತರಾಗಿದ್ದಾರೆ. ಇವರು ಮಾಡುತ್ತಿದ್ದ ಆಂಜನೇಯ ಪಾತ್ರವನ್ನು ಈಗಲೂ ಹಿರಿಯರು ನೆನಪು ಮಾಡಿಕೊಳ್ಳುತ್ತಾರೆ. ಇವರು ಕೃಷಿಕರಾಗಿದ್ದರು. ಇವರು ನಿಧನರಾದಾಗ 80 ವರ್ಷ ವಯಸ್ಸಾಗಿತ್ತು. 

    ಇವರ ಪತ್ನಿ ಜಯಮ್ಮ, ಇವರ ಮಗ ಎಚ್.ಕೆ. ನಂಜಯ್ಯ(ಗೋಪಿ) ಕೃಷಿಕರಾಗಿರುವ ಜೊತೆಗೆ ಮಾವು ಬೆಳೆಗಾರರ ಸಂಘದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. 

    ಎಚ್.ಎಂ. ಪುಟ್ಟಸ್ವಾಮಯ್ಯ ಅವರು ಕೃಷಿ ಚಟುವಟಿಕೆಯಲ್ಲಿ ಪರಿಣತಿಯನ್ನು ಹೊಂದಿದ್ದರು. ರೇಷ್ಮೆ ಗೂಡನ್ನು ಬೆಳೆಯುವಲ್ಲಿ ಈ ಭಾಗದಲ್ಲಿ ಹೆಸರು ವಾಸಿಯಾಗಿದ್ದರು. ಶಿಸ್ತು, ಶ್ರದ್ಧೆಯನ್ನು ವ್ಯವಸಾಯದಲ್ಲಿ ಅಳವಡಿಸಿಕೊಂಡಿದ್ದ ಇವರು ಕೃಷಿಯಲ್ಲಿ ನಿಪುಣತೆಯನ್ನು ಹೊಂದಿದ್ದರು. 

    ಉತ್ತಮ ಮಾವಿನ ಗಿಡಗಳು ಹಾಗೂ ಹಸುಗಳನ್ನು ಕೊಂಡುಕೊಳ್ಳಲು ಇವರನ್ನು ಹಲವು ಊರುಗಳ ಜನರು ಬಂದು ತಮ್ಮ ಜೊತೆ ಕರೆದುಕೊಂಡು ಹೋಗುತ್ತಿದ್ದರು. ರೇಷ್ಮೆ ಮೊಟ್ಟೆ ತಂದು ಚಾಕಿ ಮಾಡಿ ಉತ್ತಮವಾಗಿ ರೇಷ್ಮೆ ಗೂಡನ್ನು ಬೆಳೆಯುತ್ತಿದ್ದರು. ಯಾವುದೇ ರೀತಿಯ ಸೌಕರ್ಯಗಳಿಲ್ಲದ ಸಮಯದಲ್ಲಿ ಕೃಷಿ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಇತರರಿಗೆ ಮಾದರಿಯಾಗಿದ್ದರು. ಈಚೆಗೆ ನಿಧನರಾದ ಇವರಿಗೆ 81 ವರ್ಷ ವಯಸ್ಸಾಗಿತ್ತು.

    ಇವರ ಪತ್ನಿ ಜಯಲಕ್ಷ್ಮಮ್ಮ, ಇವರ ಮಗ ಎಚ್.ಪಿ. ನಂಜೇಗೌಡ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾಗಿದ್ದಾರೆ. ಇದರ ಜೊತೆಗೆ ಸ್ನೇಹ ಕೂಟ ಸಂಸ್ಥೆ ಸ್ಥಾಪಿಸಿ ಅದರ ಅಧ್ಯಕ್ಷರಾಗಿ ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳನ್ನು ಆಯೋಜಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ಗುತ್ತಿಗೆದಾರರಾಗಿ, ಪೃವೃತ್ತಿಯಲ್ಲಿ ಸಾಂಸ್ಕೃತಿಕ ಸಂಘಟಕರಾಗಿಯೂ ಕೆಲಸ ಮಾಡುತ್ತಿದ್ದಾರೆ. 

    ಎಚ್.ಎಂ. ರಾಮೇಗೌಡ : ಎಚ್.ಎಂ. ರಾಮೇಗೌಡ ಎಂದರೆ ಯಾರಿಗೂ ಗೊತ್ತಾಗುವುದಿಲ್ಲ. ರಾಮನಗರದಲ್ಲಿ ದಿನಸಿ ವ್ಯಾಪಾರಿಗಳ ಪ್ರಮುಖ ಸಾಲಿನಲ್ಲಿ ಕೇಳಿ ಬರುವ ಮೊದಲು ಹೆಸರು ಹುಣಸನಹಳ್ಳಿ ರಾಮಣ್ಣರ ದಿನಸಿ ಅಂಗಡಿ. ರಾಮಣ್ಣ ಅವರು ಕಳೆದ 51 ವರ್ಷಗಳಿಂದ ದಿನಸಿ ವ್ಯಾಪಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಗುಣಮಟ್ಟದ ಆಹಾರ ಪದಾರ್ಥಗಳನ್ನು ಸೂಕ್ತ ಬೆಲೆಗೆ ನೀಡುವುದು ಇವರ ಹೆಗ್ಗಳಿಕೆಯಾಗಿದೆ. 

    ಆಹಾರ ಪದಾರ್ಥಗಳ ಗುಣಮಟ್ಟದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳದ ಹುಣಸನಹಳ್ಳಿ ರಾಮಣ್ಣ ಅವರು ತಮ್ಮ ಇಳಿ ವಯಸ್ಸಿನಲ್ಲಿಯೂ ಚಟುವಟಿಕೆಯಿಂದ ಇದ್ದಾರೆ. ರಾಮನಗರದಲ್ಲಿ ಬಿಗ್‌ ಬಜಾರ್, ಮಾಲ್‌ಗಳು ಬಂದರೂ ರಾಮಣ್ಣ ಅವರ ಅಂಗಡಿಕೆ ಕುಂದುಂಟಾಗಿಲ್ಲ.

ಲೇಖನ–ಎಸ್. ರುದ್ರೇಶ್ವರ, 
ಸಂಶೋಧನಾ ವಿದ್ಯಾರ್ಥಿ,    
ಬೆಂಗಳೂರು ವಿಶ್ವವಿದ್ಯಾಲಯ

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑