Tel: 7676775624 | Mail: info@yellowandred.in

Language: EN KAN

    Follow us :


ನೀಲಸಂದ್ರ ಭೈರವೇಶ್ವರ ಸ್ವಾಮಿಯ ಅದ್ದೂರಿ ಜಾತ್ರೋತ್ಸವ

Posted Date: 12 Apr, 2019

ನೀಲಸಂದ್ರ ಭೈರವೇಶ್ವರ ಸ್ವಾಮಿಯ ಅದ್ದೂರಿ ಜಾತ್ರೋತ್ಸವ

ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಜಾತ್ರಾ ಮಹೋತ್ಸವಗಳಲ್ಲಿ ಒಂದಾದ ನೀಲಸಂದ್ರ ಗ್ರಾಮದ ಹೊರವಲಯದಲ್ಲಿರುವ ಶ್ರೀ ಭೈರವೇಶ್ವರ ಸ್ವಾಮಿ ಜಾತ್ರೆಯು ಇಂದು ಅಧಿಕೃತವಾಗಿ ಚಾಲನೆಗೊಂಡಿತು.


ನಿನ್ನೆಯಿಂದ ಜಾತ್ರಾ ಮಹೋತ್ಸವ ಪ್ರಾರಂಭವಾದರೂ ನಾಳೆಯಿಂದ ವಿದ್ಯುಕ್ತ ಚಾಲನೆ ದೊರೆಯಲಿದ್ದು ಸುಮಾರು ೫ ದಿನಗಳ ಕಾಲ ಜಾತ್ರೆ ನಡೆಯಲಿದೆ.


ಸುಮಾರು ೧೦೦ ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಈ  ಜಾತ್ರಾ ಮಹೋತ್ಸವಕ್ಕೆ ಅದರದೇ ಆದ ಇತಿಹಾಸ ಇದೆ ಎಂದು ನೀಲಸಂದ್ರ ಗ್ರಾಮ ಮತ್ತು ಅಕ್ಕಪಕ್ಕದ ಗ್ರಾಮಗಳ ಹಿರಿಯರು ನೆನಪಿಸಿಕೊಳ್ಳುತ್ತಾರೆ.


ಹಿನ್ನೆಲೆ: ಇದು ಚೋಳರ ಕಾಲದ ದೇವಸ್ಥಾನವಾಗಿದ್ದು  ಶ್ರೀ ಆದಿ ಚುಂಚನಗಿರಿ ಹಾಗೂ  ನೀಲಸಂದ್ರದ ಶ್ರೀ ಭೈರವೇಶ್ವರ ಸ್ವಾಮಿ ಅಣ್ಣ-ತಮ್ಮಂದಿರಾಗಿದ್ದು ಪ್ರತಿಷ್ಠಾಪನೆಗೊಳ್ಳಲು ಜಾಗವಿಲ್ಲದ ಸಂದರ್ಭದಲ್ಲಿ ಇಬ್ಬರೂ ಮಾತನಾಡಿ ಕೊಂಡು ಇಬ್ಬರಿಗೂ ಸೂಕ್ತ ಸ್ಥಳ ದೊರಕಿದ ನಂತರ ಮತ್ತೆ ವಾಪಸ್ ಇದೇ ಸ್ಥಳಕ್ಕೆ ಬಂದು ಭೇಟಿಯಾಗೋಣ ಎಂದು ಕೊಂಡು ಇಬ್ಬರೂ ಜಾಗವನ್ನು ಹುಡುಕಲು ಹೊರಟರಂತೆ. ಶ್ರೀ ಭೈರವೇಶ್ವರ ಸ್ವಾಮಿಯು ನೀಲಸಂದ್ರಕ್ಕೆ ಆಗಮಿಸಿ ನಾನು ನೆಲೆಯೂರಲು ಇದೇ ಪ್ರಸಕ್ತ ಜಾಗವೆಂದು ತಿಳಿದು  ಅಲ್ಲಿ ನೆಲೆಯೂರುತ್ತಾನೆ. ವಾಪಸ್ ಬರುತ್ತೇನೆಂದು ಹೇಳಿ ಹೋಗಿದ್ದ ಶ್ರೀ ಭೈರವೇಶ್ವರನನ್ನು ಕಾದು ಕಾದು ಸಾಕಾದ ಶ್ರೀ ಆದಿಚುಂಚನಗಿರಿ ಸ್ವಾಮಿಯು ಸಂಶಯಗೊಂಡು ತನ್ನ ದಿವ್ಯದೃಷ್ಠಿಯಿಂದ ಎಲ್ಲಿರಬಹುದು ಎಂದು ನೋಡಿದಾಗ ನೀಲಸಂದ್ರ ಗ್ರಾಮದ ತೋಪಿನಲ್ಲಿ ನೆಲೆಯೂರಿದ್ದನ್ನು ಖಚಿತಪಡಿಸಿಕೊಂಡು, ಆಗಮಿಸಿದ ಸಂದರ್ಭದಲ್ಲಿ  ನೀಲಸಂದ್ರದಲ್ಲಿ  ಶ್ರೀ ಭೈರವೇಶ್ವರನನ್ನು ಕಂಡ ಆದಿ ಚುಂಚನಗಿರಿ ಸ್ವಾಮಿ ಕೋಪಗೊಂಡು ನನಗೆ ಮೋಸ ಮಾಡಿದೆಯಾ ಎಂದು ಕಾಲಿನಿಂದ ಒದೆಯಲು ಕಾಲೆತ್ತಿದಾಗ ಭೈರವೇಶ್ವರ ಸ್ವಾಮಿಯು ಮಗ್ಗುಲಾಗಿ ಓರೆಯಾಗುತ್ತಾನೆ. ಅದರಂತೆ ಆ ದೇವರ ಕಳಸವೂ ಸಹ ಈಗಲೂ ಓರೆಯಾಗೇ ಇದ್ದು  ಇನ್ನು ಮುಂದೆ ನನಗೆ ಬಂದ ಭಕ್ತರು ನಿನಗೆ ಬಾರದಿರಲಿ ಎಂಬ ಶಾಪವನ್ನು ನೀಡಿ ವಾಪಸ್ಸಾಗುತ್ತಾನೆ ಎಂಬ ಉಲ್ಲೇಖವಿದೆ ಎಂದು ಸ್ಥಳೀಯರು ವಿವರಿಸುತ್ತಾರೆ.


ಅದರಂತೆ ಈ ಬಾರಿಯೂ ಸಹ ಜಾತ್ರಾ ಮಹೋತ್ಸವಕ್ಕೆ ಈಗಾಗಲೇ ಸಕಲ ಸಿದ್ದತೆಗಳು ನಡೆಯುತ್ತಿದ್ದು ಸುಮಾರು ೫ ದಿನಗಳ ಕಾಲ ನಡೆಯುವ ಈ ಜಾತ್ರೆಗೆ ನೀರು, ವಿದ್ಯುತ್, ಜನರು ಉಳಿದುಕೊಳ್ಳಲು ಸಮುದಾಯ ಭವನ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ,

ನಾಳೆ  ಮಧ್ಯಾಹ್ನ ೧೨ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ಸಮಸ್ತ ಭಕ್ತಾಧಿಗಳಿಂದ ಅನ್ನಸಂತರ್ಪಣೆ (ಮೀಸಲು) ನಡೆಯುತ್ತದೆ.


ಮೀಸಲು ದಿನದಂದು ತಗಚಗೆರೆ, ಮೋಳೆದೊಡ್ಡಿ, ನೀಲಸಂದ್ರ, ಹರಿಸಂದ್ರ, ತಿಮ್ಮಸಂದ್ರ, ಪೂಜಾರಿದೊಡ್ಡಿ, ಸಣಬನಹಳ್ಳಿ, ಲಾಳಾಘಟ್ಟ, ಕೋಡಿಪುರ ಗ್ರಾಮ ಗಳಿಂದ ಉರಿಬಿಸಿಲಿನಲ್ಲಿ  ಮೀಸಲು ಹೆಡಿಗೆಗಳನ್ನು ಹೊತ್ತು ತರಲಾಗುತ್ತದೆ, ಹೆಡಿಗೆಯಲ್ಲಿ ಹೊತ್ತು ತಂದಂತಹ ಸಾಮಾಗ್ರಿಗಳಿಂದ ಅಡುಗೆ ತಯಾರಿಸಿ ದೇವರಿಗೆ ನೈವೇದ್ಯ ನೀಡಿ ಆನಂತರ ಜನರಿಗೆ ಪ್ರಸಾದ ನೀಡಲಾಗುತ್ತದೆ.


ದಿ.೧೪ ರಂದು ಭಾನುವಾರ ಬೆಳಿಗ್ಗೆಯಿಂದ ಸಂಜೆ ೬ ಗಂಟೆಯವರೆಗೆ ಮುಡಿ, ಬಾಯಿಬೀಗ, ವಾಹನೋತ್ಸವ ನಡೆಯುತ್ತದೆ. ಈ ದಿನ ಜನರು ಭಕ್ತಿಯಿಂದ ಸಕಲ ಕಾರ್ಯಗಳು ಸಿದ್ದಿದಲೆಂದು ಹೊತ್ತಿರುವ ಹರಕೆಗಳನ್ನು ತೀರಿಸಲು ತಲೆಯ ಕೂದಲನ್ನು ಮುಡಿಯನ್ನಾಗಿ ಕೊಟ್ಟು ಬಾಯಿ ಬೀಗವನ್ನು ಚುಚ್ಚಿಸಿಕೊಂಡು ತಮ್ಮ ಇಷ್ಠಾರ್ಥ ನೆರವೇರಿಸಿ ದೇವರಿಗೆ ಶರಣಾಗುತ್ತಾರೆ. 


ದಿ.೧೫ರಂದು ಬಿಡತಿ ಇರುವುದರಿಂದ  ಎರಡು ದಿನದಿಂದ ದಣಿದವರಿಗೆ ವಿಶ್ರಾಂತಿ ತೆಗೆದುಕೊಳ್ಳಲೆಂದು  ಬಿಡುವನ್ನು ನೀಡಲಿದ್ದು ಅಂದು ಯಾವುದೇ ಕಾರ್ಯ ಕ್ರಮಗಳು ಇರುವುದಿಲ್ಲ. ಸಾಯಂಕಾಲ ೪.೦೦ ಗಂಟೆಯ ನಂತರ ವೀರಗಾಸೆ ಕಾರ್ಯಕ್ರಮವಿರುತ್ತದೆ.


೧೬ರಂದು ಬುಧವಾರ ಮಧ್ಯಾಹ್ನ ೧೨.೦೦ ಗಂಟೆಯಿಂದ ಜೋಗಿಗಳ ಕುಣಿತ, ಪಾನಕದ ಬಂಡಿ ಉತ್ಸವ ನಡೆಯಲಿದೆ. ಆ ದಿನದ ವಿಶೇಷತೆಯೇ ವಿಶೇಷವಾಗಿದೆ. ಶ್ರೀ ಭೈರವೇಶ್ವರ ಸ್ವಾಮಿಯ ಒಕ್ಕಲುತನಕ್ಕೆ ಸೇರಿದ ಹೆಣ್ಣು ಮಗಳ ಗಂಡನನ್ನು ಆಸ್ತಿಯ ಆಸೆಗಾಗಿ ಹೊಡೆದು ಸಾಯಿಸಿ ಕಲ್ಯಾಣಿಗೆ ಹಾಕಲಾಗಿರುತ್ತದೆ.  ಆಗ ಆ ಹೆಣ್ಣು ಮಗಳು ಎಲ್ಲಾ ದೇವರುಗಳನ್ನು ಮೊರೆ ಹೋದರೂ ಆಕೆಯ ಗಂಡನನ್ನು ಬದುಕಿಸಲು ಸಾಧ್ಯವಾಗಿರುವುದಿಲ್ಲ, ಆನಂತರ ತನ್ನ ತವರು ಮನೆಯ ದೇವರಾದ ಶ್ರೀ ಭೈರವೇಶ್ವರನನ್ನು ಪ್ರಾರ್ಥಿಸುತ್ತಾಳೆ.  ಮರಣ ಹೊಂದಿದ ಗಂಡನನ್ನು ಬೈರವೇಶ್ವರ ಸ್ವಾಮಿಯು ಮತ್ತೆ ಬದುಕಿಸುತ್ತಾನೆ. ಅಂದು ಆಕೆ ನಾನು ಬದುಕಿರುವವರೆಗೂ ನನ್ನ ತವರು ಮನೆಯ ದೇವರನ್ನು ಪ್ರಾರ್ಥಿಸುತ್ತೇನೆಂದು ಶಪಥ ಮಾಡುತ್ತಾಳೆ. ಆ ದಿನದ ಪ್ರತೀಕವಾಗಿ  ಜೋಗಿಗಳ ಕುಣಿತವನ್ನು ಏರ್ಪಡಿಸಲಾಗುತ್ತದೆ.


ಅಂದು ಜೋಗಿಗಳು ಮೈ ಮೇಲಿನ ಬಟ್ಟೆಯನ್ನು ತೆಗೆದು ಓರ್ವ ವ್ಯಕ್ತಿಯನ್ನು ಕಲ್ಯಾಣಿಗೆ ಹಾಕಲಾಗುತ್ತದೆ. ಆತ ಸತ್ತಂತೆ ನಟಿಸುತ್ತಾನೆ. ಆ ಸಂತೋಷದಿಂದ ಜೋಗಿಗಳು ಬೇವಿನಸೊಪ್ಪನ್ನು ಹಿಡಿದು ಭಂಗಿ ಕಾಳನ್ನು ತಿಂದು ಮನಬಂದಂತೆ ಕಲ್ಯಾಣಿ ಸುತ್ತ ಕುಣಿಯುತ್ತಾರೆ. ಆನಂತರ ಸತ್ತ ವ್ಯಕ್ತಿ ಮೇಲೆದ್ದು ಬರುತ್ತಾನೆ. ಇದು ಈ ದಿನದ ವಿಶೇಷತೆಯಾಗಿದ್ದು ತನ್ನ ಒಕ್ಕಲುತನದ ಹೆಣ್ಣು ಮಗಳ ಮಾಂಗಲ್ಯ ಭಾಗ್ಯವನ್ನು ಕರುಣಿಸಿದ ಆ ದೇವರ ನೆನಪಿಗಾಗಿ ಈ ದಿನವನ್ನು ಅದ್ದೂರಿ ಯಾಗಿ ಆಚರಿಸಲಾಗುತ್ತದೆ.


ಇಷ್ಟೆಲ್ಲಾ ಇತಿಹಾಸ ಇರುವ ಈ ದೇವಸ್ಥಾನಕ್ಕೆ ದೂರದ ಊರುಗಳಿಂದ ಭಕ್ತರು ಆಗಮಿಸಲಿದ್ದು,  ಈ ದೇವರಿಗೆ ದೂರದೃಷ್ಠಿ ಜಾಸ್ತಿ ಇರುವುದರಿಂದ ಇಲ್ಲಿನವರಿಗಿಂತ ದೂರದೂರಿನವರಿಗೆ ಬೇಗ ಒಲಿಯುತ್ತಾನೆಂಬ ಪ್ರತೀತಿ ಇದೆ.

ಆದ್ದರಿಂದ ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ದೂರಾದೂರುಗಳಿಂದ ಜನರು ಆಗಮಿಸುತ್ತಾರೆ. ತಮ್ಮ ಇಷ್ಠಾರ್ಥ ನೆರವೇರಿಸಿದ  ದೇವರ ಕೃಪೆಗೆ ಪಾತ್ರರಾಗುತ್ತಾರೆ.


ಒಟ್ಟಾರೆ ತನ್ನದೇ ಆದ ಚರಿತ್ರೆಯನ್ನು ಹೊಂದಿರುವ ಶ್ರೀ ಭೈರವೇಶ್ವರ ಸ್ವಾಮಿಯು ಬಹಳ ಶಕ್ತಿಯುಳ್ಳ ದೇವರಾಗಿದ್ದು ಅಂದುಕೊಂಡಿದ್ದು ನೆರವೇರಿಸುವ ಶಕ್ತಿಯನ್ನು ಹೊಂದಿದವನಾಗಿದ್ದಾನೆ ಎಂಬ ಪ್ರತೀತಿ ಇದೆ.


ಖ್ಯಾತ ಚಲನಚಿತ್ರ ನಟ ಲೂಸ್ ಮಾದ ಎಂದೇ ಹೆಸರಾದ ಯೋಗೀಶ್ ಸಹ ಇದೇ ದೇವರ ಒಕ್ಕಲು, ಹಾಗಾಗಿ ಈ ರೀತಿಯ ಅನೇಕ ಪರ ಊರಿನ ಭಕ್ತಾದಿಗಳು ಈ ದೇವರ ದೂರದೃಷ್ಟಿ ಗೆ ಉದಾಹರಣೆ.ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑