Tel: 7676775624 | Mail: info@yellowandred.in

Language: EN KAN

    Follow us :


ಸರಣಿ ದೋಖಾ ಎಸಗಿದ ಕಿರಿಯ ಇಂಜಿನಿಯರ್ ಶಂಕರ್ ಅಮಾನತು

Posted Date: 16 May, 2019

ಸರಣಿ ದೋಖಾ ಎಸಗಿದ ಕಿರಿಯ ಇಂಜಿನಿಯರ್ ಶಂಕರ್ ಅಮಾನತು

*ನಮ್ಮ ಪತ್ರಿಕೆಯ ಫಲಶೃತಿ*

ಹೊಂಗನೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ತುಂಡು ಗುತ್ತಿಗೆಗಳ ಸರಣಿ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆಂಬ ದೂರಿನ ಮೇರೆಗೆ ತನಿಖೆಗೆ ಒಳಪಟ್ಟು ಅಕ್ರಮಗಳು ಸಾಬೀತು ಆಗಿದ್ದರಿಂದ ಪ್ರೊಬೆಷನರಿ ಸೇವಾ ಅವಧಿಯಲ್ಲಿ ಇರುವ ಕಿರಿಯ ಇಂಜಿನಿಯರ್ *ಜಿ ಎಸ್ ಶಂಕರ್* ರವರನ್ನು ರಾಮನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಶಿಸ್ತು ಪ್ರಾಧಿಕಾರಿಗಳಾದ ಎಂ ಪಿ ಮುಲ್ಲೈ ಮುಹಿಲನ್ ರವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.


ಮಾಹಿತಿ ಹಕ್ಕು ಕಾರ್ಯಕರ್ತ ವಂದಾರಗುಪ್ಪೆ ಕೃಷ್ಣೇಗೌಡ ರ ಮಾಹಿತಿ ಹಕ್ಕುಗಳ ದಾಖಲೆಗಳ ಮೇರೆಗೆ ನಮ್ಮ ಪತ್ರಿಕೆಯ ವರದಿಗಾರರು ಖುದ್ದಾಗಿ ಭೇಟಿ ನೀಡಿ ಸಂಬಂಧಿಸಿದ ಖಾಸಗಿಯವರಿಂದ ಅಂದಾಜು ಪಟ್ಟಿ ತಯಾರಿಸಿ ಸರಣಿ ವರದಿಗಳನ್ನು ಮಾಡಿದರ ಫಲವಾಗಿ ದೋಖಾ ಎಸಗಿದ ಶಂಕರ್ ಮೇಲೆ ಅಧಿಕಾರಿಗಳು ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದಾರೆ.


೨೦೧೭/೨೦೧೮ ನೇ ಸಾಲಿನ ಜಿಲ್ಲಾ ಪಂಚಾಯತ್ ಅನುದಾನದಡಿಯಲ್ಲಿ ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು ಜಿಲ್ಲಾ ಪಂಚಾಯತಿಯ ವಂದಾರಗುಪ್ಪೆ ಗ್ರಾಮ ಪಂಚಾಯತಿ ಲಾಳಾಘಟ್ಟ ಗ್ರಾಮದ ಸರ್ಕಾರಿ ಶಾಲೆಯ ಸೈಕಲ್ ಸ್ಟ್ಯಾಂಡ್ ನಿರ್ಮಾಣ ಕಾಮಗಾರಿ, ತಗಚಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹರಿಸಂದ್ರ ಗ್ರಾಮದ ಅಡ್ಡರಸ್ತೆಯಲ್ಲಿರುವ ಬಸ್ ತಂಗುದಾಣ ಮತ್ತು ನೀಲಸಂದ್ರ ಗ್ರಾಮ ಪಂಚಾಯತಿ ಗ್ರಾಮದ ಅಡ್ಡರಸ್ತೆಯಲ್ಲಿರುವ ಬಸ್ ತಂಗುದಾಣದ ಅಕ್ರಮ ಕಾಮಗಾರಿಯ ಬಗ್ಗೆ ಚನ್ನಪಟ್ಟಣ ವಿಭಾಗದ ಎಇಇ ಮತ್ತು ಸಿಬ್ಬಂದಿಗಳು ಅಧಿಕಾರಿ ಮತ್ತು ಅರ್ಜಿದಾರರ ಸಮ್ಮುಖದಲ್ಲಿ ಮಹಜರು ನಡೆಸಿ ವರದಿ ಸಲ್ಲಿಕೆಯ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ.


ಮಹಜರು ವೇಳೆ ಎಲ್ಲಾ ದಾಖಲೆಗಳನ್ನು ಕ್ರೋಢಿಕರಿಸಿ, ಕಾಮಗಾರಿಗಳ ಅಳತೆ ಪುಸ್ತಕದ ಸಮೇತ ಹಾಜರು ಪಡಿಸುವುಂತೆ ಸೂಚಿಸಿದ್ದರೂ ಸಹ ಯಾವುದೇ ದಾಖಲೆಗಳನ್ನು ಸಲ್ಲಿಸದ ಕಾರಣ ಇಂದಿನಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ ಎಂದು ತಮ್ಮ ನಡಾವಳಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.


ನಡಾವಳಿ ಪತ್ರ ಸಂಖ್ಯೆ ರಾಜಿಪಂ:೨/ಸಿಆರ್-೨೦೧೯/೧೮-೧೯/೪೫೮೪, ಅಡಿಯಲ್ಲಿ ಅಮಾನತು ಆದೇಶ ಹೊರಡಿಸಿರುವುದರ ಜೊತೆಯಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬೆಂಗಳೂರು.

ಮುಖ್ಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರ್ ಇಲಾಖೆ ರಾಮನಗರ.

ಕಾರ್ಯಪಾಲಕ ಅಭಿಯಂತರರು ಪಂಚಾಯತ್ ರಾಜ್ ಇಂಜಿನಿಯರಿಂಗ್‌ ವಿಭಾಗ ರಾಮನಗರ ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ ಚನ್ನಪಟ್ಟಣ ಇವರಿಗೂ ಕಳುಹಿಸಿ ಸದರಿಯವರ ಸೇವಾ ಪುಸ್ತಕದಲ್ಲಿ ದಂಡನೆ ವಿಧಿಸಿರುವುದನ್ನು ಕಡ್ಡಾಯವಾಗಿ ದಾಖಲಿಸಿ ದೃಢೀಕರಿಸಬೇಕೆಂದು ತಿಳಿಸಿರುವುದು ಅಕ್ರಮದಲ್ಲಿ ತೊಡಗಿರುವವರಿಗೆ ಎಚ್ಚರಿಕೆ ಗಂಟೆಯಾಗಿದೆ.


ಕೇವಲ ಮೂರು ಕಾಮಗಾರಿಗಳು ಮಾತ್ರ ತನಿಖೆಗೊಂಡಿದ್ದು ಈ ಮಹಾನುಭಾವ ರ ಕೈಚಳಕದಲ್ಲಿ ಕನ್ನಮಂಗಲ ಶಾಲೆ, ಹೊಂಗನೂರು ಪ್ರೌಢಶಾಲೆ ಸೇರಿದಂತೆ ಇನ್ನೂ ಅನೇಕ ಕಾಮಗಾರಿಗಳ ತನಿಖೆಯಾಗಬೇಕಿದ್ದು ಹಿರಿಯ ತನಿಖಾಧಿಕಾರಿಗಳು ಶೀಘ್ರವಾಗಿ ಸೂಕ್ತ ತನಿಖೆ ಮಾಡಿದರೆ ಶಾಶ್ವತವಾಗಿ ಕೆಲಸದಿಂದ ವಜಾ ಆಗುವುದರಲ್ಲಿ ಅನುಮಾನವೇ ಇಲ್ಲ.


ಈ ಅಧಿಕಾರಿಯ ಜೊತೆಗೆ ಅಂದಿನ ಪ್ರಭಾರ ಸಹಾಯಕ ಕಾರ್ಯಪಾಲಕ ಅಭಿಯಂತರ ಕುಮಾರಸ್ವಾಮಿ, ಗುತ್ತಿಗೆದಾರ ಸೇರಿದಂತೆ ಅಕ್ರಮಗಳಲ್ಲಿ ಭಾಗಿಯಾದ ಮತ್ತು ಸಹಕರಿಸಿದ ಎಲ್ಲರನ್ನೂ ತನಿಖೆಗೆ ಒಳಪಡಿಸಿ ಸೂಕ್ತ ಕಾನೂನು ಕ್ರಮ ಕೈಗೊಂಡರೆ ಮುಂದಿನ ಕಾಮಗಾರಿಗಳಾದರೂ ಗುಣಮಟ್ಟ ಹಾಗೂ ಸಕ್ರಮವಾಗಿ ನಡೆಯಲು ಸಹಕಾರಿಯಾಗುತ್ತದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑