Tel: 7676775624 | Mail: info@yellowandred.in

Language: EN KAN

    Follow us :


ಆರ್ ಟಿ ಇ ಮಕ್ಕಳಿಗೆ ಹೆಚ್ಚಿನ ಶುಲ್ಕ ವಸೂಲಿ ವ್ಯಾಪಕ ದೂರು ದಾಖಲು

Posted Date: 28 May, 2019

ಆರ್ ಟಿ ಇ ಮಕ್ಕಳಿಗೆ ಹೆಚ್ಚಿನ ಶುಲ್ಕ ವಸೂಲಿ ವ್ಯಾಪಕ ದೂರು ದಾಖಲು

ಚನ್ನಪಟ್ಟಣ: ಖಾಸಗಿ ಶಾಲೆಗಳಲ್ಲಿ ಆರ್ ಟಿ ಇ ಮಕ್ಕಳಿಗೆ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಾದ ನಂತರ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನಲ್ಲಿ ಪ್ರಪ್ರಥಮ ಬಾರಿಗೆ ಆರ್ ಟಿ ಇ ಪೋಷಕರಿಗೆ ಡಯಟ್ ಪ್ರಾಂಶುಪಾಲರ ಸಮ್ಮುಖದಲ್ಲಿ ದೂರು ಸಲ್ಲಿಸುವಂತೆ ರಾಮನಗರ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದರು.


ಇಂದು ಗುರುಭವನದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ತಾಲ್ಲೂಕಿನ ಹಲವಾರು ಶಾಲೆಯ ಆರ್ ಟಿ ಇ ಅಡಿಯಲ್ಲಿ ಓದುತ್ತಿರುವ ಮಕ್ಕಳ ಪೋಷಕರು ಪಾಲ್ಗೊಂಡು ದೂರಿನ ಸುರಿಮಳೆಗೈದರು, ಒಂದು ಹಂತದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಖಾಸಗಿ ಶಾಲೆಯ ಬಗ್ಗೆ ಹೆಚ್ಚಿನ ಕಾಳಜಿ ಉಳ್ಳವರು ಎಂದು ಜರಿದರಲ್ಲದೆ ಯಾವುದೇ ಖಾಸಗಿ ಶಾಲೆಯ ಆಡಳಿತ ಮಂಡಳಿಯವರು ಸಹ ಅವರ ಮಾತನ್ನು ಕೇಳುವುದಿಲ್ಲ, ಇವರ ಆದೇಶವನ್ನು ಆಡಳಿತ ಮಂಡಳಿ ಗಾಳಿಗೆ ತೂರುತ್ತಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೇಲೆ ದೂರುದಾರರು ಮುಗಿಬಿದ್ದರು.


ಆರ್ ಟಿ ಇ ಅಡಿಯಲ್ಲಿ ಓದುತ್ತಿರುವ ಮಕ್ಕಳನ್ನು ಶಾಲೆಯ ಆಡಳಿತ ಮಂಡಳಿ ಕೀಳಾಗಿ ನೋಡುತ್ತಾರೆ, ಅವರನ್ನು ಯಾವುದೇ ರೀತಿಯ ಕ್ರೀಡೆಗಾಗಲಿ ಕಂಪ್ಯೂಟರ್ ತರಗತಿಗಾಗಲಿ ಸೇರಿಸುವುದಿಲ್ಲ, ಪುಸ್ತಕಗಳು, ಸಮವಸ್ತ್ರಗಳನ್ನು ಸಹ ಅವರೇ ಕೊಟ್ಟು ಹೇರಳವಾಗಿ ಹಣ ಪಡೆಯುತ್ತಾರೆ, ಯಾವುದಕ್ಕೂ ಶಾಲೆಯ ರಶೀದಿ ಕೊಡದೇ ಬಟ್ಟೆ ಮತ್ತು ಪುಸ್ತಕದ ಅಂಗಡಿಗಳ ರಶೀತಿಗಳನ್ನು ಕೊಡುತ್ತಾರೆ, ಹೆಚ್ಚುವರಿ ಶುಲ್ಕದ ರಶೀತಿಯನ್ನು ಕೊಡುವುದಿಲ್ಲ, ಕೇಳಿದರೆ ಬಿಳಿ ಚೀಟಿಯಲ್ಲಿ ಬರೆದುಕೊಡುತ್ತಾರೆ, ಮುದ್ರೆ ಮತ್ತು ಸಹಿಯನ್ನು ಹಾಕುವುದಿಲ್ಲ, ಸರ್ಕಾರವೇ ಹಣ ಸಂದಾಯ ಮಾಡಿದರೂ ಸಹ ೫,೦೦೦ ದಿಂದ ೧೭,೦೦೦ ರೂಪಾಯಿಗಳನ್ನು ಕೊಡುವಂತೆ ಒತ್ತಡ ಹೇರುತ್ತಿದ್ದಾರೆ, ಕೊಡುವುದಿಲ್ಲವೆಂದರೆ ಮಕ್ಕಳನ್ನು ಮರು ಸೇರ್ಪಡೆ ಮಾಡಿಕೊಳ್ಳುತ್ತಿಲ್ಲ ಎಂದು ದೂರಿದರು.


ಒಟ್ಟು ಹದಿನಾಲ್ಕು ದೂರುಗಳು ದಾಖಲಾಗಿದ್ದು ಅದರಲ್ಲೊಂದು ಮೌಖಿಕ ದೂರು ಸಹ ದಾಖಲಾಗಿದ್ದು *ಆರು ದೂರುಗಳು ಸ್ಪ್ರಿಂಗ್ ಫೀಲ್ಡ್ ಶಾಲೆಯ* ವಿರುದ್ದವೇ ದಾಖಲಾಗಿದ್ದು ಆಡಳಿತ ಮಂಡಳಿಯ ಲೋಪಗಳನ್ನು ತೋರಿಸುತ್ತದೆ.

ಇದರಲ್ಲಿ ಐದು ದೂರುಗಳು ಸಮಿತಿಯ ಮುಂದೆ ದಾಖಲಾದರೇ ಕೊನೆಯ ದೂರುದಾರರು ತಡವಾಗಿ ಬಂದಿದ್ದರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಿದರು.


ಇನ್ನುಳಿದಂತೆ ಬಿಜೆಎಲ್ ಶಾಲೆಯ ೨, ಬಾಲು ಪಬ್ಲಿಕ್ ಶಾಲೆಯ ೧, ನ್ಯಾಷನಲ್ ಶಾಲೆಯ ೧, ಕೇಂಬ್ರಿಡ್ಜ್ ಶಾಲೆಯ ೩ ಮತ್ತು ಹಾರಿಜಾನ್ ಶಾಲೆಯ ೧ ದೂರುಗಳನ್ನು ಸಲ್ಲಿಸಲಾಯಿತು.


ಡಯಟ್ ಪ್ರಾಂಶುಪಾಲ ಶಿವಮಾದಪ್ಪನವರು ಮಾತನಾಡಿ ಈ ದೂರುಗಳನ್ನು ಲೋಕಾಯುಕ್ತಕ್ಕೆ  ಶೀಘ್ರವಾಗಿ ಸಲ್ಲಿಸಲಾಗುವುದು, ಇವುಗಳ ವಿರುದ್ದ ಲೋಕಾಯುಕ್ತ ಅಧಿಕಾರಿಗಳು ತನಿಖೆ ಮಾಡಿ ನ್ಯಾಯ ಒದಗಿಸಿ ಕೊಡುತ್ತಾರೆ ಎಂದು ತಿಳಿಸಿದರು.


ಕ್ಷೇತ್ರ ಶಿಕ್ಷಣಾಧಿಕಾರಿ ಸೀತಾರಾಮು ಮಾತನಾಡಿ ನಾವು ಮೂರು ತಂಡಗಳನ್ನು ನಿಯೋಜನೆ ಮಾಡಿದ್ದು ಮಾಹಿತಿ ಕಲೆ ಹಾಕುತ್ತಿದ್ದೇವೆ, ಸದ್ಯದಲ್ಲೇ ಎಲ್ಲಾ ಶಾಲೆಯ ಆರ್ ಟಿ ಇ ಪೋಷಕರು ಮತ್ತು ಶಾಲೆಯ ಆಡಳಿತ ಮಂಡಳಿಯ ಸಭೆ ಕರೆದು ಚರ್ಚಿಸಿ ಪೋಷಕರಿಗೆ ನ್ಯಾಯ ಒದಗಿಸಿ ಕೊಡುವುದಾಗಿ ಭರವಸೆ ನೀಡಿದರು.


ಡಯಟ್ ಹಿರಿಯ ಉಪನ್ಯಾಸಕ ಕೃಷ್ಣೇಗೌಡ, ಮ್ಯಾನೇಜರ್ ತಾಮಪ್ರಸನ್ನ ಉಪಸ್ಥಿತರಿದ್ದರು.


ದೂರು ಸಲ್ಲಿಕೆಯ ಸಮಯದಲ್ಲಿ ದೂರುದಾರರ ಜೊತೆಗೆ ಕರ್ನಾಟಕ ರಾಜ್ಯ ರೈತಸಂಘದ ತಾಲ್ಲೂಕು ಪದಾಧಿಕಾರಿಗಳು, ಹೋರಾಟಗಾರ ಶಂಭೂಗೌಡ ಸೇರಿದಂತೆ ಅನೇಕ ಹೋರಾಟಗಾರರು ಪಾಲ್ಗೊಂಡಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑