Tel: 7676775624 | Mail: info@yellowandred.in

Language: EN KAN

    Follow us :


ಇಂದಿನ ಪೀಳಿಗೆಯ ಮಕ್ಕಳ ಆರೋಗ್ಯಕ್ಕಾಗಿ ಶುದ್ಧ ಗಾಳಿಯ ಅವಶ್ಯಕತೆ ಇದೆ ಶೈಲಾ ಶ್ರೀನಿವಾಸ

Posted Date: 03 Jun, 2019

ಇಂದಿನ ಪೀಳಿಗೆಯ ಮಕ್ಕಳ ಆರೋಗ್ಯಕ್ಕಾಗಿ ಶುದ್ಧ ಗಾಳಿಯ ಅವಶ್ಯಕತೆ ಇದೆ ಶೈಲಾ ಶ್ರೀನಿವಾಸ

ರಾಮನಗರ: ಇಂದಿನ ಮತ್ತು ಮುಂದಿನ ಪೀಳಿಗೆಗೆ ಕೊಡುಗೆ ನೀಡುವುದಾದರೆ ಶುದ್ಧ ಗಾಳಿಯನ್ನು ಕೊಡುಗೆಯಾಗಿ ನೀಡಬೇಕು, ಶುದ್ಧ ಗಾಳಿ ದೊರಕಬೇಕಾದರೆ ಕಾಡು ಮೇಡಿನ ಜೊತೆಗೆ ಅವಶ್ಯ ಜಾಗವಿರುವ ಭೂಮಿಯಲ್ಲಿ ಆಯಾ ಮಣ್ಣು ಮತ್ತು ವಾತಾವರಣಕ್ಕನುಗುಣವಾಗಿ ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಜನಸಾಮಾನ್ಯರು ತಮ್ಮ ಕರ್ತವ್ಯ ಮತ್ತು ಸಾಮಾಜಿಕ ಹೊಣೆಗಾರಿಕೆ ಎಂದು ಭಾವಿಸಿ ಭೂಮಂಡಲವನ್ನು ಹಸಿರುಕರಣ ಮಾಡುವ ಸಂಕಲ್ಪ ಮಾಡಬೇಕೆಂದು ಔಷಧೀಯ ಸಸ್ಯ ತಜ್ಞೆ  ಶಿಕ್ಷಕಿ ಶೈಲಾ ಶ್ರೀನಿವಾಸ್ ಹೇಳಿದರು.


ಅವರು ಕೈಲಾಂಚ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು, ಸಹ ಶಿಕ್ಷಕರು ಮತ್ತು ಗ್ರಾಮಸ್ಥರ ಜೊತೆಗೂಡಿ ಗ್ರಾಮದ ಕೆರೆಯಂಚಿನಲ್ಲಿ  ವಿಶ್ವ ಪರಿಸರ ದಿನ ಜಾಗೃತಿಗಾಗಿ ಸಸ್ಯಗಳನ್ನು ನೆಟ್ಟು ಬಳಿಕ ಮಾತನಾಡಿದರು.


ವಿಶ್ವ ಪರಿಸರ ದಿನ ಕೇವಲ ನಾಮಾಕವಸ್ಥೆ ದಿನಾಚರಣೆಯಾಗದೇ ಜನ ಜೀವನದ ಅವಿಭಾಜ್ಯ ಅಂಗವಾಗಬೇಕಿದೆ. ಈ ಬಾರಿಯ ವಿಶ್ವಸಂಸ್ಥೆಯ ಘೋಷವಾಕ್ಯ ವಾಯು ಮಾಲಿನ್ಯ, ಈ ಘೋಷ ವಾಕ್ಯವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು.


ಮೆಗಾಸಿಟಿ ಜನರಿಂದ ಗ್ರಾಮೀಣ ಬದುಕಿನ ಜನರೂ ಬದಲಾಗುತ್ತಿದ್ದು ಅವರ ಇತ್ತೀಚಿನ ಜೀವನಶೈಲಿ ವಾಯು ಮಾಲಿನ್ಯಕ್ಕೆ ವಿಷಪೂರಿತ ಕೊಡುಗೆ ನೀಡುತ್ತಿದೆ, ಇದನ್ನು ತಡೆಗಟ್ಟದಿದ್ದರೆ ಭವಿಷ್ಯದ ದಿನಗಳು ದುರ್ಬರವಾಗಲಿದೆ, ವಿಶ್ವ ಆರೋಗ್ಯ ಸಂಸ್ಥೆಯ ವಾಯು ಗುಣಮಟ್ಟದ ಮಾನದಂಡಗಳ ಉಲ್ಲಂಘನೆಯಾಗುತ್ತಿದ್ದು ಜಗತ್ತಿನ ಹತ್ತು ಜನರಲ್ಲಿ ಒಂಭತ್ತು ಜನರು ಅಶುದ್ಧ ಗಾಳಿಯನ್ನು ಉಸಿರಾಡುತ್ತಿದ್ದಾರೆ.


ಕೈಗಾರಿಕೆಗಳು, ವಾಹನಗಳು, ಹೊರಹಾಕುವ ಹೊಗೆ ಅವೈಜ್ಞಾನಿಕವಾಗಿ ತ್ಯಾಜ್ಯವನ್ನು ಸುಡುವುದರಿಂದ ಸೃಷ್ಟಿಯಾಗುವ ವಿಷಗಾಳಿ, ಕಾಡಿನ ಬೆಂಕಿಯಿಂದ ಉಂಟಾಗುವ ಸಮಸ್ಯೆ, ಇವೆಲ್ಲದರ ಜೊತೆಗೆ ಅಡುಗೆ ಮನೆಗಳಲ್ಲೂ ಬಳಸುವ ನಾನಾ ವಿಧದ ಅಡುಗೆ ಎಣ್ಣೆ, ಉರುವಲುಗಳಿಂದಲೂ ವಾಯು ಮಾಲಿನ್ಯವುಂಟಾಗುತ್ತಿದೆ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.


ವಾಯುಮಾಲಿನ್ಯದಿಂದ ಮಕ್ಕಳ ದೈಹಿಕ ಹಾಗೂ ಬೌದ್ಧಿಕ ಬೆಳವಣಿಗೆಯ ಮೇಲೆ ಪರಿಣಾಮಗಳುಂಟಾಗುತ್ತಿವೆ. ವಿಶ್ವದ ಜನರಲ್ಲಿ ಆಸ್ತಮಾದಂತಹ ಸಮಸ್ಯೆಗಳು ಕಾಡುತ್ತಿರುವುದಲ್ಲದೇ ಪ್ರತಿ ವರ್ಷ 7 ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದಾರೆ. ಇವೆಲ್ಲವನ್ನೂ ತಡೆಗಟ್ಟಲು ಇರುವ ಏಕೈಕ ದಾರಿಯೆಂದರೆ ಹೆಚ್ಚಿನ ಸಂಖ್ಯೆಯಲ್ಲಿ ಗಿಡಮರಗಳನ್ನು ಬೆಳೆಸುವುದು. ನಮ್ಮದೇ ಜಿಲ್ಲೆಯ ಸಾಲು ಮರದ ತಿಮ್ಮಕ್ಕ ತಮ್ಮ ಸಾಧನೆಗಾಗಿ ದೇಶ ಮೆಚ್ಚುವ ಗೌರವ ಗಳಿಸಿರುವುದನ್ನು ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಮಾದರಿಯಾಗಿಸಿಕೊಂಡು ತಮ್ಮ ವಾಸಸ್ಥಳ, ದುಡಿಮೆಯ ಸ್ಥಳಗಳನ್ನು ಹಸಿರು ಮರಗಳಿಂದ ಆವೃತವಾಗಿರುವಂತೆ ನೋಡಿಕೊಳ್ಳಬೇಕು ಎಂದರು.


ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಶಾಲಾ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಗಿಡ ನೆಡುವ ಅಭಿಯಾನದಲ್ಲಿ ಪಾಲ್ಗೊಂಡು ಶಾಲಾವರಣ, ಕೆರೆಯಂಚು, ರಸ್ತೆಯ ಇಕ್ಕೆಲಗಳಲ್ಲಿ  ಗಿಡಗಳನ್ನು ನೆಟ್ಟು  ನೀರೆರೆದರು. ಹಿಂದಿನ ವರ್ಷ ವಿಶ್ವ ಪರಿಸರ ದಿನದಂದು ಶಾಲಾವರಣದಲ್ಲಿ ನೆಟ್ಟು ಬೇಸಿಗೆಯಲ್ಲೂ ಕಾಪಾಡಿಕೊಂಡಿದ್ದ ಗಿಡಗಳು ಇಂದು ನಳನಳಿಸುತ್ತಿರುವುದನ್ನು ವಿದ್ಯಾರ್ಥಿಗಳ ಸಾಧನೆ ಎಂದು ಇದೇ ಸಮಯದಲ್ಲಿ ಅಭಿನಂದಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑