Tel: 7676775624 | Mail: info@yellowandred.in

Language: EN KAN

    Follow us :


ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ನಿಧನ

Posted Date: 10 Jun, 2019

ಖ್ಯಾತ ನಾಟಕಕಾರ, ಸಿನಿಮಾ ನಿರ್ದೇಶಕ, ನಟ, ಪುಣೆ ಫಿಲ್ಮ್ ಇನ್ ಸ್ಟಿಟ್ಯೂಟ್ ನಿರ್ದೇಶಕ ಡಾ ಗಿರೀಶ್ ರಘುನಾಥ್ ಕಾರ್ನಾಡ್ ರವರು ಇಂದು ಬೆಳಿಗ್ಗೆ ನಿಧನರಾದರು, ಹಲವು ಅಂಗಾಂಗಗಳ ವೈಫಲ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು.


ಮಹಾರಾಷ್ಟ್ರ ರಾಜ್ಯದ ಸಬರಕಾಂತ ಜಿಲ್ಲೆಯ ಮಾಥೇರಾನ್ ನಲ್ಲಿ ಮೇ ೧೯/೧೯೩೮ ರಲ್ಲಿ  ಡಾ ರಘುನಾಥ್ ಕಾರ್ನಾಡ್ ಕೃಷ್ಣಬಾಯಿ ದಂಪತಿಗಳ ಪುತ್ರನಾಗಿ ಜನಿಸಿದ ಕಾರ್ನಾಡರು ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡು ತಂದೆಯ ಪ್ರಗತಿಪರ ಮತ್ತು ಅದರ್ಶ ಮೈಗೂಡಿಸಿಕೊಂಡು ಬೆಳೆದರು.


ಬಾಲ್ಯದಲ್ಲೇ ರವೀಂದ್ರನಾಥ ಟಾಗೋರ್, ಬ್ರೆಕ್ಟ, ವಿಜಯ್ ತೆಂಡೂಲ್ಕರ್, ಚಕ್ರವರ್ತಿ ರಾಜಗೋಪಾಲಾಚಾರಿ ರವರ ಪ್ರಭಾವಕ್ಕೆ ಒಳಗಾದ ಕಾರ್ನಾಡರು ಹಲವು ಕೃತಿಗಳನ್ನು ರಚಿಸಲು, ನಾಟಕಗಳನ್ನು ಬರೆಯಲು, ಸಾಧ್ಯವಾಯಿತು ಎಂದು ತಮ್ಮ ಹಲವಾರು ಭಾಷಣಗಳಲ್ಲಿ ಹೇಳಿಕೊಂಡಿದ್ದರು. 


ಮಹಾರಾಷ್ಟ್ರ ರಾಜ್ಯದಲ್ಲಿ ಜನನವಾದರೂ ಸಂಪೂರ್ಣ ವಿದ್ಯಾಭ್ಯಾಸವನ್ನು ಕರ್ನಾಟಕದಲ್ಲಿ ಪಡೆದರು, ಪ್ರಾಥಮಿಕ ಶಿಕ್ಷಣ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ, ಪ್ರೌಢಶಿಕ್ಷಣ ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ ಹಾಗೂ ಪದವಿ ಶಿಕ್ಷಣ ಕರ್ನಾಟಕ ಕಾಲೇಜಿನಲ್ಲಿ ಮಾಡಿದರು. ಆ ಬಳಿಕ ಹೋಡ್ಸ್೯ ಸ್ಕಾಲರ್ಶಿಪ್ ಪಡೆದುಕೊಂಡು ಆಕ್ಸ್‌ಫರ್ಡ್‌ನಲ್ಲಿ ಹೆಚ್ಚಿನ ವ್ಯಾಸಂಗಕ್ಕೆ ತೆರಳಿದರು. ಗಿರೀಶ ಕಾರ್ನಾಡರು ಆಕ್ಸ್‌ಫರ್ಡ್‌ ಡಿಬೇಟ್ ಕ್ಲಬ್ ಗೆ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಥಮ ಏಷಿಯನ್ ಆಗಿದ್ದಾರೆ.


ತಮ್ಮ ಓದು, ಚರ್ಚೆಯನ್ನು ದೇಶ ವಿದೇಶದಲ್ಲೂ ಹರಡಿ ವಿದ್ವಾಂಸರ ಸಖ್ಯದಲ್ಲಿ, ಕಲಾಸೇವಕರ ಸಹವಾಸದಲ್ಲಿ ಗುರುತಿಸಿಕೊಂಡ ಕಾರ್ನಾಡ್ ಬುದ್ಧಿಜೀವಿ ಎನಿಸಿಕೊಂಡರು. ಬಹುಭಾಷಾ ಪಂಡಿತರೆಂಬ ಹಿರಿಮೆಗೆ ಪಾತ್ರರಾಗಿ, ಷಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿ ಕಾರ್ನಾಡ್ ಸೇವೆ ಸಲ್ಲಿಸಿದರು. ವಿದೇಶದಲ್ಲಿದ್ದಾಗಲೇ ಕನ್ನಡ ನಾಟಕಗಳನ್ನು ಬರೆದು ಇಲ್ಲಿಗೆ ಬಂದು ಹೊಸ ನಾಟಕಗಳ ಓದು, ಪ್ರದರ್ಶನಕ್ಕೆ ದಾರಿ ಮಾಡಿಕೊಂಡರು.


ಇವರು ಕನ್ನಡವಲ್ಲದೆ ಹಿಂದಿ, ಪಂಜಾಬಿ, ಮರಾಠಿ ಹಾಗೂ ಭಾರತೀಯ ಹಲವು ಭಾಷೆಗಳಿಗೆ ತಮ್ಮ ನಾಟಕಗಳು ಅನುವಾದಗೊಂಡು, ಪ್ರದರ್ಶನಗೊಂಡು ಅನೇಕ ಪ್ರಶಸ್ತಿ ಪುರಸ್ಕಾರ ಪಡೆದುಕೊಂಡಿವೆ.


ಆಕ್ಸ್‌ಫರ್ಡ್‌ನಿಂದ ಬಂದ ನಂತರ ಮದ್ರಾಸ್‌ನಲ್ಲಿ ಆಕ್ಸ್ ಫ಼ರ್ಡ್ ಯೂನಿವರ್ಸಿಟಿ ಪ್ರೆಸ್ ನಲ್ಲಿ ಸಂಪಾದಕರಾಗಿ ನೌಕರಿಯಲ್ಲಿದ್ದು, ಅದನ್ನು ತೊರೆದು ಧಾರವಾಡಕ್ಕೆ ವಾಪಾಸಾಗಿ ನಾಟಕ ಕ್ಷೇತ್ರದಲ್ಲಿ ಕೃಷಿ ನಡೆಸಿದರು.


ಇಂಗ್ಲೆಂಡಿಗೆ ತೆರಳುವ ಮೊದಲೆ ಗಿರೀಶ ಕಾರ್ನಾಡರು ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದರು, ಅವರ ಮೊದಲ ಸಾಹಿತ್ಯ ಕೃತಿ *ಯಯಾತಿ* ಈ ನಾಟಕ ಧಾರವಾಡದ ಮನೋಹರ ಗ್ರಂಥಮಾಲೆಯಲ್ಲಿ ಪ್ರಕಟವಾಯಿತು. ಇಂಗ್ಲೆಂಡಿನಿಂದ ಮರಳಿದ ಬಳಿಕ *ತುಘಲಕ್*  ಹಾಗೂ *ಹಯವದನ*  ಪ್ರಕಟವಾದವು. ಈ ನಡುವೆ ಪುಣೆ ಫಿಲ್ಮ್ ಇನ್ಸ್ಟಿಟ್ಯೂಟ್‍ನ ನಿರ್ದೇಶಕ ರಾಗಿದ್ದು, ಮತ್ತೆ ಅದನ್ನು ಬಿಟ್ಟು ಮುಂಬಯಿಗೆ ಬಂದ ಕಾರ್ನಾಡರು ಕೆಲವು ಚಲನ ಚಿತ್ರಗಳಲ್ಲಿ ನಟಿಸಿದರು. ಆ ರಂಗವನ್ನೂ ತ್ಯಜಿಸಿ ಮತ್ತೆ ಬೆಂಗಳೂರಿಗೆ ಬಂದರು. ಅಲ್ಲಿಂದ ರಚಿತವಾದ ಅವರ ನಾಟಕಗಳು-ಅಂಜುಮಲ್ಲಿಗೆ, ನಾಗಮಂಡಲ, ತಲೆದಂಡ ಹಾಗೂ ಅಗ್ನಿ ಮತ್ತು ಮಳೆ.


ಅವರ ಇನ್ನಿತರ ನಾಟಕಗಳೆಂದರೆ

೧. ಮಾ ನಿಷಾಧ - ಏಕಾಂಕ ನಾಟಕ

೨. ಯಯಾತಿ - ೧೯೬೧

೩. ತುಘಲಕ್ - ೧೯೬೪

೪. ಹಯವದನ - ೧೯೭೨

೫. ಅಂಜುಮಲ್ಲಿಗೆ - ೧೯೭೭

೬. ಹಿಟ್ಟಿನ ಹುಂಜ ಅಥವಾ ಬಲಿ - ೧೯೮೦

೭. ನಾಗಮಂಡಲ - ೧೯೯೦

೮. ತಲೆದಂಡ - ೧೯೯೦

೯. ಅಗ್ನಿ ಮತ್ತು ಮಳೆ - ೧೯೯೫

೧೦. ಟಿಪ್ಪುವಿನ ಕನಸುಗಳು - ೧೯೯೭

೧೧. ಒಡಕಲು ಬಿಂಬ - ೨೦೦೫

೧೨. ಮದುವೆ ಆಲ್ಬಮ್

೧೩. ಫ್ಲಾವರ್ಸ - ೨೦೧೨

೧೪. ಬೆಂದ ಕಾಳು ಆನ್ ಟೋಸ್ಟ- ೨೦೧೨. ಇದರ ಜೊತೆಗೆ ಬ್ರಿಟಿಷ್ ಬ್ರಾಡ್‍ಕಾಸ್ಟಿಂಗ್ ಕಾರ್ಪೊರೇಶನ್ ಗಾಗಿ ಭಾರತದ ಸ್ವಾತಂತ್ರೋತ್ಸವದ ೫೦ ವರ್ಷದ ನೆನಪಿನ ಕಾರ್ಯಕ್ರಮಕ್ಕಾಗಿ ಟಿಪ್ಪುವಿನ ಕನಸುಗಳು ಎಂಬ ನಾಟಕ ಬರೆದುಕೊಟ್ಟರು.


೨೦೧೧ ರಲ್ಲಿ ಆಡಾಡತ ಆಯುಷ್ಯ - ಎಂಬ ಆತ್ಮಕಥನವನ್ನು ಬರೆದು ಪ್ರಕಟಿಸಿದ್ದಾರೆ. ಅವರ ಸಮಗ್ರ ಕೃತಿಗಳಿಗಾಗಿ ಭಾರತ ಸರ್ಕಾರ ಜ್ಞಾನಪೀಠ ಪ್ರಶಸ್ತಿ ನೀಡಿ ಗೌರವಿಸಿದೆ.


ಅವರ ವೈಚಾರಿಕತೆ ದೃಷ್ಟಿಯಿಂದ ಹಲವಾರು ಹಿಂದೂ ವಿರೋಧ ಹೇಳಿಕೆಗಳು ಹಾಗೂ ಸಾರ್ವಜನಿಕವಾಗಿ ಗೋಮಾಂಸ ಭಕ್ಷಣೆ ಹೇಳಿಕೆಗಳ ಮೂಲಕ ಆಸ್ತಿಕರ ಕೆಂಗಣ್ಣಿಗೆ ಗುರಿಯಾಗಿ ವಿರೋಧ ಕಟ್ಟಿಕೊಂಡಿದ್ದು ಬಿಟ್ಟರೆ ಅತ್ಯುನ್ನತ ಸ್ಥಾನ ಗಳಿಸಿಕೊಂಡು ದೇಶ ವಿದೇಶಗಳಲ್ಲಿ ಹೆಸರು ಗಳಿಸಿ ಅಮರರಾಗಿದ್ದಾರೆ.


*ಉತ್ತಮ ನಾಟಕಕಾರ ಗಿರೀಶ್ ಕಾರ್ನಾಡ್ ರವರಿಗೆ ಶ್ರದ್ಧಾಂಜಲಿ ಅರ್ಪಿಸೋಣಾ*


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑