Tel: 7676775624 | Mail: info@yellowandred.in

Language: EN KAN

    Follow us :


ಹಳ್ಳಿ ನಗರದಲ್ಲಿ ಹಂದಿ ನಾಯಿಗಳ ದರ್ಬಾರ್ ಕಣ್ಮುಚ್ಚಿ ಕುಳಿತ ಇಲಾಖೆಯ ಅಧಿಕಾರಿಗಳು

Posted Date: 17 Jul, 2019

ಹಳ್ಳಿ ನಗರದಲ್ಲಿ ಹಂದಿ ನಾಯಿಗಳ ದರ್ಬಾರ್ ಕಣ್ಮುಚ್ಚಿ ಕುಳಿತ ಇಲಾಖೆಯ ಅಧಿಕಾರಿಗಳು

ಚನ್ನಪಟ್ಟಣ: ನಗರವೂ ಸೇರಿದಂತೆ ತಾಲ್ಲೂಕಿನ ಪ್ರತಿ ಹಳ್ಳಿಗಳಲ್ಲಿಯೂ ಬೀದಿ ನಾಯಿಗಳು, ಹಿಂಡಿಂಡು ಹಂದಿಗಳ ಜೊತೆಗೆ ಬಿಡಾಡಿ ಜಾನುವಾರುಗಳು ಸಂಚರಿಸುತ್ತಿದ್ದು ವಾಹನ ಸವಾರರಿಗೆ ಕಿರಿಕಿರಿ ಮತ್ತು ಆಯಾಯ ಸ್ಥಳದ ಸೌಂದರ್ಯ ಹಾಳಾಗುತ್ತಿರುವುದರ ಜೊತೆಗೆ ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗಿವೆ.


*ನಗರದ ತುಂಬೆಲ್ಲಾ ಕಸದ ರಾಶಿ*


ನಗರಸಭೆಯ ಪೌರಾಯುಕ್ತ ರು ಎಸಿಬಿ ದಾಳಿಯಿಂದ ಅಮಾನತು ಆದ ನಂತರ ದಿಕ್ಕೆಟ್ಟ ಸಿಬ್ಬಂದಿ ಸರಿಯಾದ ಸಮಯಕ್ಕೆ ಕಸ ವಿಲೇವಾರಿ ಮಾಡದ್ದರಿಂದ ನಗರವೆಲ್ಲಾ ಗಬ್ಬೆದ್ದು ನಾರುತ್ತಿವೆ, ತೋಟಗಾರಿಕೆ ಇಲಾಖೆಯ ಮುಂದೆ, ಹಳೇ ಕೋಟ್೯ ರಸ್ತೆ, ಮದೀನಾ ಚೌಕ, ಕೋಟೆ ಪ್ರದೇಶ, ಖಾಲಿ ನಿವೇಶನಗಳು ಸೇರಿದಂತೆ ಬಹುತೇಕ ನಗರದ ತುಂಬೆಲ್ಲಾ ಕಸ ಬಿದ್ದಿದ್ದು ಗಬ್ಬೆದ್ದು ನಾರುತ್ತಿದೆ.


*ಕಸದ ರಾಶಿಯಲ್ಲಿ ಹಂದಿ ನಾಯಿಗಳು*


ಗಬ್ಬೆದ್ದು ನಾರುತ್ತಿರುವ ಕಸದ ರಾಶಿಯ ವಾಸನೆಗೆ ಹಂದಿಗಳು, ನಾಯಿಗಳು ಮತ್ತು ಬೀಡಾಡಿ ಜಾನುವಾರುಗಳು ಗುಂಪು ಗುಂಪಾಗಿ ಕೆದಕಿ ಇನ್ನಷ್ಟು ಹೆಚ್ಚು ಜಾಗದಲ್ಲಿ ಕಸ ಹರಡುವುದರ ಜೊತೆಗೆ ಅವುಗಳ ಕಸವೂ ಸೇರಿ ಇಡೀ ನಗರವೇ ಗಬ್ಬು ನಾರುವಂತೆ ಮಾಡುತ್ತಿವೆ.


*ಎಲ್ಲೆಂದರಲ್ಲಿ ಕೋಳಿ ಮತ್ತು ಮಾಂಸದಂಗಡಿಗಳು*


ನಗರವೂ ಸೇರಿದಂತೆ ಬಹುತೇಕ ಹಳ್ಳಿಗಳಲ್ಲಿ ಜನ ನಿಬಿಡ ಪ್ರದೇಶಗಳು ಸೇರಿ ಎಲ್ಲೆಂದರಲ್ಲಿ ಮಾಂಸ ಮತ್ತು ಕೋಳಿ ಅಂಗಡಿಗಳು ತಲೆ ಎತ್ತಿದ್ದು ಎಲ್ಲಾ ಅಂಗಡಿಗಳ ಮುಂದೆ ಬೀದಿ ನಾಯಿಗಳ ಹಿಂಡು ನೆರೆದಿರುತ್ತವೆ, ಶೇಕಡಾ ಎಂಭತ್ತಕ್ಕೂ ಹೆಚ್ಚು (ದನದ ಮಾಂಸದಂಗಡಿಗಳು ಸೇರಿ) ಅಂಗಡಿಗಳಿಗೆ ಪರವಾನಗಿ ಇಲ್ಲದಿದ್ದರೂ ಸಹ ನಗರಸಭೆ, ಆರೋಗ್ಯ ಇಲಾಖೆ ಮತ್ತು ಗ್ರಾಮ ಪಂಚಾಯತಿ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸದಿರುವುದು ಅವರ ಕರ್ತವ್ಯ ವೈಫಲ್ಯತೆಯನ್ನು ತೋರಿಸುತ್ತದೆ.


*ಕೆರೆ ತಡಿ ಮತ್ತು ಏರಿಗಳೆಲ್ಲವೂ ತ್ಯಾಜ್ಯ ಮಯ*


ನಗರದ ಸುತ್ತಮುತ್ತ ಇರುವ ಕೆರೆಗಳು ಮತ್ತು ಎಲ್ಲಾ ಹಳ್ಳಿಗಳ ಕೆರೆ ತಡಿ ಮತ್ತು ಏರಿಗಳೆಲ್ಲವೂ ಮಾಂಸ ಮತ್ತು ಕೋಳಿ ತ್ಯಾಜ್ಯದಿಂದ ತುಂಬಿದ್ದು ನೀರಿನ ಜೊತೆಗೆ ವಾಸಿಸುವ ಜೀವ ಸಂಕುಲಗಳೆಲ್ಲವೂ ಸಾಯುತ್ತಿವೆಯಾದರೂ ಸಂಬಂಧಿಸಿದ ಅಧಿಕಾರಿಗಳಾಗಲಿ ಸ್ಥಳೀಯ ಮುಖಂಡರು ಮತ್ತು ಸಾರ್ವಜನಿಕರು ಸಹ ಎಚ್ಚೆತ್ತುಕೊಳ್ಳದಿರುವುದರಿಂದ ಸಾಂಕ್ರಾಮಿಕ ರೋಗಗಳು ಉಲ್ಬಣಿಸಿವೆ.


*ಸಭೆಗೆ ಸೀಮಿತವಾದ ಕಾಳಜಿ*


ತಾಲ್ಲೂಕು ಪಂಚಾಯತಿಯಲ್ಲಿ ಅಧ್ಯಕ್ಷರು, ಕಾರ್ಯನಿರ್ವಹಣಾಧಿಕಾರಿಗಳು ಮತ್ತು ವೈದ್ಯಾಧಿಕಾರಿಗಳು ಅಧಿಕಾರಿಗಳ ಸಭೆ ಕರೆದು ಸಾಂಕ್ರಾಮಿಕ ರೋಗಗಳ ಬಗ್ಗೆ ಸಭೆ ನಡೆಸಿದ್ದು ಬಿಟ್ಟರೆ ಘೋಷಿಸಿದ ಯಾವುದೇ ರೀತಿಯ ಸ್ವಚತೆಯ ಬಗ್ಗೆ ಗಮನ ನೀಡದಿರುವುದು ಉತ್ತರನ ಪೌರುಷ ಒಲೆ ಮುಂದೆ ಎಂಬಂತಾಗಿದೆ.


*ಆಸ್ಪತ್ರೆಗಳ ಮುಂದೆ ರೋಗಿಗಳ ಸಾಲು*


ತಾಲ್ಲೂಕಿನ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಜ್ವರ ಬಂದ ರೋಗಿಗಳು ಸಾಲುಗಟ್ಟಿ ನಿಂತಿರುವ ದೃಶ್ಯ ಸರ್ವೇಸಾಮಾನ್ಯವಾಗಿದ್ದು ಸಾಂಕ್ರಾಮಿಕ ರೋಗ ಹರಡುತ್ತಿರುವ ಎಲ್ಲಾ ಲಕ್ಷಣಗಳು ತಾಲ್ಲೂಕಿನಲ್ಲಿ ಗೋಚರಿಸುತ್ತವೆ.


*ಬಹುತೇಕ ಎಲ್ಲಾ ಆಸ್ಪತ್ರೆಗಳಲ್ಲೂ ಸ್ವಚ್ಚತೆ ಕಡಿಮೆ ಇರುವುದರಿಂದ ಸೊಳ್ಳೆಗಳ ವಾಸಸ್ಥಾನ ಇಲ್ಲೇ ಹೆಚ್ಚಾಗಿದೆ, ಸೊಳ್ಳೆಗಳಿಂದ ಹರಡಬಹುದಾದ ರೋಗಗಳ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೋ ಅಥವಾ ಅವರದೇ ಆಸ್ಪತ್ರೆಗಳಲ್ಲಿ ಸೊಳ್ಳೆಗಳಿಂದ ಕಚ್ಚಿಸಿ ರೋಗ ಮತ್ತಷ್ಟು ಉಲ್ಬಣಗೊಳ್ಳುವಂತೆ‌ಮಾಡುತ್ತಾರೋ ಎಂಬುದನ್ನು ವೈದ್ಯರೇ ನಿರ್ಧರಿಸಬೇಕಾಗಿದೆ ?*


*ಕಾನೂನುಬದ್ಧ ಕ್ರಮ ಜರುಗಿಸಲಿ*


ಸಂಬಂಧಿಸಿದ ಅಧಿಕಾರಿಗಳು ಸ್ವಚ್ಚತೆ ಬಗ್ಗೆ ನಿಗಾವಹಿಸಿ ಹಂದಿ ಮತ್ತು ಬೀಡಾಡಿ ಜಾನುವಾರುಗಳು ಹಾಗೂ ಮಾಂಸದಂಗಡಿಗಳ  ಮಾಲೀಕರಿಗೆ ತಿಳುವಳಿಕೆ ನೋಟೀಸ್ ನೀಡಿ ಸ್ವಚ್ಚತೆಗೆ ಆದ್ಯತೆ ನೀಡಿದರೆ ಮುಖ್ಯಮಂತ್ರಿ ಗಳ ಸ್ವಕ್ಷೇತ್ರದ ಮರ್ಯಾದೆ ಜೊತೆಗೆ ಜನರ ಆರೋಗ್ಯವು ಸ್ಥಿರವಾಗಿರಲು ನೆರವಾದಂತಾಗುತ್ತದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑